
ಚಿಕ್ಕಮಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿ(ಕೆಐಒಸಿಎಲ್) ಒಡೆತನದಲ್ಲಿರುವ ಕುದುರೆಮುಖ ಟೌನ್‌ಶಿಪ್ ಸಹಿತ 285 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಪ್ರಸ್ತಾವನೆ ಸಂಬಂಧ ಜಂಟಿ ಸರ್ವೆಗೆ ತಯಾರಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಕೆಐಒಸಿಎಲ್, ಕಾರ್ಯಗತಗೊಳಿಸಲು ಮುಂದಾಗಿದೆ. ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ವೇಳೆ ಆಗಿದ್ದ ಅರಣ್ಯ ನಾಶಕ್ಕೆ ಸಂಬಂಧಿಸಿದಂತೆ ಕೇಂದ್ರದ ಉನ್ನತಾಧಿಕಾರ ಸಮಿತಿ(ಸಿಇಸಿ) ಶಿಫಾರಸು ಜಾರಿಗೊಳಿಸುವ ತನಕ ಸಂಡೂರಿನಲ್ಲಿ ಅರಣ್ಯ ಭೂಮಿ ಹಸ್ತಾಂತರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅದಕ್ಕಾಗಿ ಕುದುರೆಮುಖ ಟೌನ್‌ಶಿಪ್ ಸೇರಿ ಅಷ್ಟೂ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿದೆ.
ಕುದುರೆಮುಖದಲ್ಲಿ 1977ರಲ್ಲಿ ಗಣಿಗಾರಿಕೆ ಆರಂಭವಾದ ನಂತರ 6 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ನೆಲೆಸಿದ್ದರು. ಇದರಿಂದಾಗಿ ಅಲ್ಲೊಂದು ಟೌನ್‌ಶಿಪ್ ನಿರ್ಮಾಣವಾಗಿತ್ತು. ವಸತಿ ಗೃಹ, ಸರ್ಕಾರಿ ಶಾಲೆ, ಕೆಂದ್ರೀಯ ವಿದ್ಯಾಲಯ, ಆಸ್ಪತ್ರೆ, ಆಟದ ಮೈದಾನ, ಮಾರುಕಟ್ಟೆ, ಸಿನಿಮಾ ಮಂದಿರ, ಕ್ರೀಡಾಂಗಣ, ಕ್ಲಬ್‌ಹೌಸ್ ಸೇರಿ ಎಲ್ಲಾ ಸೌಲಭ್ಯಗಳಿದ್ದವು.
2005ರಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಈಗಲೂ ಆ ಕಟ್ಟಡಗಳಿದ್ದು, ಜನರಿಲ್ಲದೆ ಬಣಗುಡುತ್ತಿವೆ. ಟೌನ್‌ಶಿಪ್‌ನಲ್ಲಿ ಮನೆಗಳು, ಕಚೇರಿಗಳು, ಶಾಲೆಗಳು ಇವೆ. ಕೆಲ ಕಟ್ಟಡಗಳನ್ನು ಅರಣ್ಯ ಇಲಾಖೆ ಬಳಕೆ ಮಾಡುತ್ತಿದೆ. ಸುತ್ತಮುತ್ತ ಇರುವ ಜನರಿಗಾಗಿ ಆಸ್ಪತ್ರೆ ಮತ್ತು ಶಾಲೆ ಕೂಡ ಚಾಲ್ತಿಯಲ್ಲಿವೆ.
ಕೆಐಒಸಿಎಲ್ ವಶದಲ್ಲಿ 285 ಎಕರೆ ಜಾಗ, ಅದರಲ್ಲಿರುವ ಟೌನ್‌ಶಿಪ್ ಸೇರಿದಂತೆ ಎಲ್ಲವೂ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲು ತಯಾರಿ ನಡೆದಿದೆ. ಇದಕ್ಕೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ರೈತ ಸಂಘದ ಕಳಸ ತಾಲ್ಲೂಕಿನ ಕುದುರೆಮುಖ ಘಟಕ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಟೌನ್‌ಶಿಪ್ ಹಾಗೇ ಉಳಿಸಬೇಕು, ಕಂದಾಯ ಭೂಮಿಯನ್ನು ಸ್ಥಳೀಯ ಜನ ಬಳಕೆಗೆ ಬಿಡಬೇಕು ಎಂದು ಮನವಿ ಮಾಡಿದೆ.
ಇನ್ನೊಂದೆಡೆ ಸಂಡೂರು ತಾಲ್ಲೂಕಿನ ದೇವದಾರಿ ಅರಣ್ಯ ಪ್ರದೇಶದ ಮೂಲಕ ಅದಿರು ಸಾಗಣೆಗೆ ಅವಕಾಶ ನೀಡಬಾರದು ಎಂದು ಜನಸಂಗ್ರಾಮ ಪರಿಷತ್ ಕೂಡ ಮನವಿ ಸಲ್ಲಿಸಿದೆ. ಈ ಎರಡೂ ಮನವಿ ಆಧರಿಸಿ ಅಗತ್ಯ ಕ್ರಮಕ್ಕೆ ಅರಣ್ಯ ಸಚಿವರು ಇಲಾಖೆಗೆ ಸೂಚನೆ ನೀಡಿದ್ದಾರೆ. ಇದರ ಮೇರೆಗೆ ವಾಸ್ತವಾಂಶ ತಿಳಿದುಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ಮಂಗಳೂರು ಮತ್ತು ಬಳ್ಳಾರಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಧಾನ ಅರಣ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ವರದಿ ಕೇಳಿದ್ದಾರೆ.
ಕುದುರೆಮುಖ ವ್ಯಾಪ್ತಿಯಲ್ಲಿ ಕೆಐಒಸಿಎಲ್ ಜಾಗ ಎಷ್ಟಿದೆ ಕಂದಾಯ ಜಾಗ ಎಷ್ಟಿದೆ ಟೌನ್‌ಶಿಪ್ ಇರುವ ಜಾಗ ಯಾರಿಗೆ ಸೇರಿದ್ದು ಎಂಬುದರ ಕುರಿತು ತಿಳಿದುಕೊಳ್ಳಲು ಈಗ ಅರಣ್ಯ ಇಲಾಖೆ ಮತ್ತು ಕೆಐಒಸಿಎಲ್ ಜಂಟಿ ಸರ್ವೆ ನಡೆಸಲಿವೆ. ಅಗತ್ಯ ದಾಖಲೆಗಳನ್ನು ಕ್ರೂಢೀಕರಿಸಿಕೊಳ್ಳಲಾಗುತ್ತಿದ್ದು ಶೀಘ್ರವೇ ಸರ್ವೆ ಕಾರ್ಯ ಆರಂಭವಾಗಲಿದೆ. ಬಳಿಕ ವರದಿಯನ್ನು ಪಿಸಿಸಿಎಫ್ ಅವರಿಗೆ ಸಲ್ಲಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.