ADVERTISEMENT

ದಾರಿಕಾಣದೆ ಕಂಗಾಲಾದ ಕಾರ್ಮಿಕರು

ಸ್ವಗ್ರಾಮ ತಲುಪಲು ಪರದಾಟ– ಅನಕ್ಷರತೆ, ಭಾಷೆ ಸಮಸ್ಯೆಯ ಗೊಂದಲ

​ಪ್ರಜಾವಾಣಿ ವಾರ್ತೆ
Published 18 ಮೇ 2020, 17:32 IST
Last Updated 18 ಮೇ 2020, 17:32 IST
ಮೂಡಿಗೆರೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಮಧ್ಯಪ್ರದೇಶಕ್ಕೆ ತೆರಳಲು ಕಾದು ಕುಳಿತಿದ್ದ ವಲಸೆ ಕಾರ್ಮಿಕರು.
ಮೂಡಿಗೆರೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಮಧ್ಯಪ್ರದೇಶಕ್ಕೆ ತೆರಳಲು ಕಾದು ಕುಳಿತಿದ್ದ ವಲಸೆ ಕಾರ್ಮಿಕರು.   

ಮೂಡಿಗೆರೆ: ತಾಲ್ಲೂಕಿನ ವಿವಿಧ ಪ್ರದೇಶಗಳ ಕಾಫಿತೋಟ, ಕಟ್ಟಡ ನಿರ್ಮಾಣ, ಶೌಚಾಲಯ ನಿರ್ವಹಣೆ, ರಸ್ತೆ ಕಾಮಗಾರಿ ಸೇರಿದಂತೆ ಮುಂತಾದ ಕೆಲಸಗಳಿಗೆ ಬಂದಿದ್ದ ಬಿಹಾರ, ಮಧ್ಯಪ್ರದೇಶ ಹಾಗೂ ತಮಿಳುನಾಡಿನ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಪರದಾಡುತ್ತಿದ್ದಾರೆ.

ಕಾಫಿತೋಟಗಳಿಗೆ ಗುಂಪಾಗಿ ಬಂದಿದ್ದ ಕಾರ್ಮಿಕರು, ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಬಸ್‌ಗಳ ಮೂಲಕ ಹೇಗೋ ತಮ್ಮ ಸ್ವಗ್ರಾಮಗಳ ದಾರಿ ಹಿಡಿದಿದ್ದರು. ಆದರೆ, ಒಂದೋ, ಎರಡೋ ಕುಟುಂಬಗಳು ಕೆಲಸ ಮಾಡಲು ಬಂದವರು ತಮ್ಮೂರಿಗೆ ತೆರಳಲು ವಾಹನಗಳನ್ನು ಕೊಂಡೊಯ್ಯಲಾಗದೇ ಪರದಾಡುತ್ತಿದ್ದಾರೆ. ನಾಲ್ಕೈದು ಜನರಿರುವ ಕಾರ್ಮಿಕರು ಪ್ರತಿದಿನ ತಾಲ್ಲೂಕು ಕಚೇರಿಯ ಬಳಿ ಬಂದು ತಮ್ಮೂರಿನತ್ತ ತೆರಳುವ ಕಾರ್ಮಿಕರಿದ್ದಾರೆಯೇ ಎಂದು ದಾರಿ ಕಾಯುವ ದೃಶ್ಯ ಸಾಮಾನ್ಯವಾಗಿದೆ.

‘ನಮ್ಮೂರಿನಿಂದ ಡಿಸೆಂಬರ್‌ನಲ್ಲೇ 30 ಮಂದಿ ಕೆಲಸಕ್ಕೆ ಬಂದಿದ್ದೆವು. ಕೊರೊನಾದಿಂದಾಗಿ ಮೂರ್ನಾಲ್ಕು ಎಸ್ಟೇಟ್ ಬದಲಾಯಿಸಿದೆವು. ಪಾಸ್ ತೆಗೆದುಕೊಂಡು ಊರಿಗೆ ಹೋಗಬಹುದು ಎನ್ನುತ್ತಿದ್ದಂತೆ ಮೇಸ್ತ್ರಿ ಎಲ್ಲರಿಗೂ ಪಾಸ್‌ಗೆ ಅರ್ಜಿ ಹಾಕಿದರು. ನಮ್ದು ನಾಲ್ಕು ಜನರದ್ದು ಪಾಸ್ ಬಂದಿರಲಿಲ್ಲ. ಉಳಿದವರೆಲ್ಲರೂ ಬಸ್ ಮಾಡಿಕೊಂಡು ಊರಿಗೆ ಹೋದರು. ಮೇಸ್ತ್ರಿ ಅರ್ಧ ದುಡ್ಡುಕೊಟ್ಟು ಊರಿಗೆ ಬಂದ ಮೇಲೆ ಉಳಿದದ್ದನ್ನು ಕೊಡುತ್ತೇನೆ ಎಂದಿದ್ದಾರೆ. ಈಗ ಪಾಸ್ ಬಂದಿದೆ. ಆದರೆ ನಾವು ನಾಲ್ಕೇ ಜನ ಬಸ್ ಮಾಡಿಕೊಂಡು ಹೋಗೊಕಾಗ್ತಿಲ್ಲ. ನಮ್ಮೂರಿನ ಕಡೆಗೆ ಹೋಗೊರು ಯಾರಾದರೂ ಇದ್ದಾರಾ ಎಂದು ದಿನ ಕಾಯುತ್ತಿದ್ದೇವೆ’ ಎಂದು ಮೂರು ದಿನಗಳಿಂದ ಪುಟ್ಟ ಕಂದಮ್ಮನೊಂದಿಗೆ ಅಡ್ಯಂತಾಯ ರಂಗಮಂದಿರದ ಬಳಿ ಆಶ್ರಯ ಪಡೆದು ಕಾಯುತ್ತಿರುವ ಚಿನ್ನಸೇಲಂನ ಸರಸ್ವತಿ ಅಳಲು ತೋಡಿಕೊಂಡರು.

ADVERTISEMENT

ಲಾಕ್‌ಡೌನ್ ಸಡಿಲಿಕೆಯಾಗಿ ಅಂತರ ರಾಜ್ಯಗಳಿಗೆ ತೆರಳಲು ಅನುಮತಿಯಿದ್ದರೂ, ಅನಕ್ಷರತೆ, ಭಾಷೆ ಸಮಸ್ಯೆಯ ಗೊಂದಲಗಳು ಹಲವು ಕಾರ್ಮಿಕರಿಗೆ ಪಾಸ್ ಪಡೆಯಲು ಅಡ್ಡಿಯಾಗಿದ್ದು, ಅತಂತ್ರರಾಗಿದ್ದಾರೆ. ಊರಿನತ್ತ ಹೊರಟ ಕಾರ್ಮಿಕರನ್ನು ಕೆಲವು ಮಾಲೀಕರು ಪಟ್ಟಣಕ್ಕೆ ತಂದುಬಿಟ್ಟು ಕೈತೊಳೆದುಕೊಂಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು ವಲಸೆ ಕಾರ್ಮಿಕರ ನೆರವಿಗೆ ಬಂದು ಊರಿಗೆ ಹೊರಟುನಿಂತ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಬೇಕು ಎಂಬುದು ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.