ಚಿಕ್ಕಮಗಳೂರು: ಭೂಮಿ ಸಾಗುವಳಿ ಮಾಡುತ್ತಿದ್ದರೂ ಖಾತೆ ಮಾತ್ರ ಇನ್ನೂ ಮೂರ್ನಾಲ್ಕು ತಲೆಮಾರಿನ ಹಿರಿಯರ ಹೆಸರಿನಲ್ಲೇ ಮುಂದುವರಿದಿವೆ. ಜಿಲ್ಲೆಯಲ್ಲಿ 97 ಸಾವಿರಕ್ಕೂ ಹೆಚ್ಚು ಖಾತೆಗಳು ಮೃತಪಟ್ಟವರ ಹೆಸರಿನಲ್ಲೇ ಇವೆ ಎಂಬುದನ್ನು ಕಂದಾಯ ಇಲಾಖೆ ಗುರುತಿಸಿದ್ದು, ಶುಲ್ಕ ರಹಿತವಾಗಿ ಖಾತೆ ಬದಲಾವಣೆ ಮಾಡಿಕೊಡಲು ಮುಂದಾಗಿದೆ.
ಅರಣ್ಯ–ಕಂದಾಯ ಭೂಮಿ ಗೊಂದಲದಿಂದ ಭೂ ಒಡೆತನ ಸಾಧ್ಯವಾಗದೆ ಜನ ಪರದಾಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪೌತಿ ಖಾತೆಗಳು ಇನ್ನೂ ಬದಲಾಗಿಲ್ಲ. ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಜನ ಕಾದಿದ್ದಾರೆ.
ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿ ಮಾಡಬೇಕಿತ್ತು. ಕೌಟುಂಬಿಕ ಕಲಹ, ಅಣ್ಣ–ತಮ್ಮಂದಿರ ನಡುವಿನ ಮನಸ್ತಾಪ ಸೇರಿ ಹಲವು ಕಾರಣಗಳಿಂದ ಹಲವರು ಪೌತಿ ಖಾತೆಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಇದರಿಂದಾಗಿ ಸತ್ತವರ ಹೆಸರಿಲ್ಲೇ 97,525 ಖಾತೆಗಳು ಮುಂದುವರಿವೆ. ಜಮೀನು ಸಾಗುವಳಿ ಮಾಡುತ್ತಿದ್ದರೂ ರೈತರ ಹೆಸರಿನಲ್ಲಿ ಜಮೀನು ಇಲ್ಲದಂತಾಗಿದೆ. ಸರ್ಕಾರದ ಯೋಜನೆಗಳ ಲಾಭ, ಬ್ಯಾಂಕ್ ಸಾಲ ಸೇರಿ ಯಾವ ಸವಲತ್ತು ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಇದನ್ನು ತಪ್ಪಿಸಲು ಈಗ ಕಂದಾಯ ಇಲಾಖೆಯೇ ಪೌತಿಖಾತೆ ಆಂದೋಲನ ಆರಂಭಿಸಿದೆ. ಮೃತರ ಕುಟುಂಬಸ್ಥರನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹುಡುಕಿ ಸ್ವಯಂ ಖಾತೆ ಮಾಡಿಕೊಡಲು ಮುಂದಾಗಿದೆ. ಖಾತೆ ಮಾಡಿಸಿಕೊಳ್ಳಲು ಮುಂದಾಗುವ ರೈತರಿಗೆ ಉಚಿತವಾಗಿ ಪೌತಿಖಾತೆ ಮಾಡಿಕೊಡಲಾಗುತ್ತಿದೆ.
ಕಂದಾಯ ಗ್ರಾಮ ರಚನೆ ಮತ್ತು ಸ್ವಯಂ ಪೋಡಿ ಕಾರ್ಯ ಮುಕ್ತಾಯವಾಗಿರುವ ಕಂದಾಯ ವೃತ್ತಗಳಲ್ಲಿ ಈ ಕಾರ್ಯವನ್ನು ಮೊದಲ ಹಂತದಲ್ಲಿ ಆರಂಭಿಸಲಾಗಿದೆ. ಮೃತಪಟ್ಟವರ ಹೆಸರಿನಲ್ಲಿ ಜಮೀನಿನ ಖಾತೆಗಳನ್ನು ಗುರುತಿಸಿ ವಾರಸುದಾರರನ್ನು ಕಂದಾಯ ಇಲಾಖೆ ಸಿಬ್ಬಂದಿಗಳೇ ಹುಡುಕಲಿದ್ದಾರೆ. ಅವರ ಕುಟುಂಬ ಸದಸ್ಯರ ಮನವೊಲಿಸಿ ಪೌತಿ ಖಾತೆ ಮಾಡಿಕೊಡಲಿದ್ದಾರೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಅಭಿಯಾನದ ಮಾದರಿಯಲ್ಲಿ ಉಚಿತವಾಗಿ ಪೌತಿಖಾತೆ ಮಾಡಲಾಗುತ್ತಿದೆ. ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ತೆರಳಲಿದ್ದಾರೆ. ಜನ ಸದುಪಯೋಗ ಮಾಡಿಕೊಳ್ಳಬೇಕು.–ಮೀನಾ ನಾಗರಾಜ್ ಜಿಲ್ಲಾಧಿಕಾರಿ
ಪ್ರತ್ಯೇಕ ಸಾಫ್ಟ್‌ವೆರ್:
ಪೌತಿ ಖಾತೆಗಾಗಿಯೇ ಪ್ರತ್ಯೇಕ ಸಾಫ್ಟ್‌ವೇರ್ ಸಿದ್ಧಪಡಿಸಲಾಗಿದೆ. ವಂಶವೃಕ್ಷವನ್ನು ಆಧಾರವಾಗಿ ಇಟ್ಟುಕೊಂಡು ಆಧಾರ್ ಇ–ಕೆವೈಸಿ ಮೂಲಕ ಒಟಿಪಿ ಪಡೆದು ವೆಬ್‌ಸೈಟ್‌ನಲ್ಲಿ ದಾಖಲಿಸಲಿದ್ದಾರೆ. ಒಬ್ಬರಿಗಿಂತ ಹೆಚ್ಚು ವಾರಸುದಾರರು ಇದ್ದರೆ ಅವರ ಹೆಸರನ್ನೂ ದಾಖಲಿಸಿ ಒಟಿಪಿ ಪಡೆದುಕೊಳ್ಳುತ್ತಾರೆ. ಬಳಿಕ ಖಾತೆ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಇದಲ್ಲದೇ ರೈತರು ನೇರವಾಗಿ ತಾಲ್ಲೂಕು ಕಚೇರಿ ನಾಡ ಕಚೇರಿ ಭೇಟಿ ನೀಡಿ ಪೌತಿಖಾತೆ ಮಾಡಿಸಿಕೊಳ್ಳಲೂ ಅವಕಾಶ ಇದೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.