ಮೂಡಿಗೆರೆ: ಜಿಲ್ಲೆಯಲ್ಲಿ ಭೂ ಕಬಳಿಕೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಸರ್ಕಾರ ಹಾಗೂ ಮೂಡಿಗೆರೆ ತಹಶೀಲ್ದಾರ್‌ಗೆ ಆದೇಶಿಸಿ 3 ವರ್ಷ ಕಳೆದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥಗೌಡ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ಬಾಳೂರು ಗ್ರಾಮದ ಸರ್ವೆ ನಂ 168ರಲ್ಲಿ ಕೆಲವರಿಗೆ 4.38 ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾನು ದೂರು ನೀಡಿದ್ದೆ. ಈ ಸಂಬಂಧ ತಹಶೀಲ್ದಾರ್ ಅವರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಿದ್ದರು. ಸೂಕ್ತ ನಿಯಮ ಅನುಸರಿಸದೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕ್ರಮ ವಹಿಸದೆ ಪ್ರಕರಣ ವಜಾಗೊಳಿಸಲಾಗಿತ್ತು. ಆದರೆ ಹೈಕೋರ್ಟ್, ಈ ಪ್ರಕರಣವನ್ನು ಕ್ರಮಬದ್ಧ ಹಾಗೂ ನಿಯಮ ಅನುಸರಿಸಿ ದಾಖಲಿಸಲು ಸರ್ಕಾರಕ್ಕೆ ಹಾಗೂ ತಹಶೀಲ್ದಾರ್‌ಗೆ ಆದೇಶಿಸಿ 3 ವರ್ಷ ಕಳೆದಿವೆ’ ಎಂದರು.
‘ತಪ್ಪು ಮಾಡಿದ್ದ ಅಧಿಕಾರಿಗಳೂ ಹುದ್ದೆಯಲ್ಲಿದ್ದು, ಶಿಕ್ಷೆಯ ಭಯವಿಲ್ಲದೆ ರಾಜ್ಯ ಹೆದ್ದಾರಿ ಹಾಗೂ ಕೆರೆ ಒತ್ತುವರಿಗೆ ಬೆಂಬಲ ನೀಡುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಸರ್ಕಾರ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯ ಹೆದ್ದಾರಿ ಹಾಗೂ ಕೆರೆ ಒತ್ತುವರಿ ತಡೆಯಲು 8 ದಿನದೊಳಗೆ ಕ್ರಮ ವಹಿಸಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.