ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನಲ್ಲಿ 10 ಸಾವಿರ ಎಕರೆಗೂ ಹೆಚ್ಚು ಭೂಮಂಜೂರಾತಿ ಅಕ್ರಮ ಎಂಬುದು ತನಿಖೆಯಿಂದ ಬಹಿರಂವಾಗಿದೆ. ವರದಿ ಸರ್ಕಾರದ ಕೈ ಸೇರಿ ವರ್ಷ ಕಳೆದರೂ ಯಾವ ಅಧಿಕಾರಿಯ ವಿರುದ್ಧ ಕ್ರಮವಾಗಿಲ್ಲ. ಅಲ್ಲದೇ 104 ಗ್ರಾಮ ಆಡಳಿತಾಧಿಕಾರಿಗಳು ಸೇರಿ ಎಲ್ಲಾ ಸಿಬ್ಬಂದಿ ಅದೇ ಸ್ಥಳಗಳಲ್ಲಿ ಮುಂದುವರಿದಿದ್ದಾರೆ.
ಎರಡೂ ತಾಲ್ಲೂಕಿನಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ 13 ತಹಶೀಲ್ದಾರ್‌ಗಳ ತಂಡವನ್ನು ಸರ್ಕಾರ ರಚನೆ ಮಾಡಿತ್ತು. ತನಿಖೆ ನಡೆಸಿ ಸರ್ಕಾರಕ್ಕೆ ತಂಡ ವರದಿ ಸಲ್ಲಿಸಿದ್ದು, ಅದರ ಪ್ರಕಾರ 10,598 ಎಕರೆ ಅಕ್ರಮ ಮಂಜೂರಾತಿ ಎಂಬುದನ್ನು ಪತ್ತೆ ಮಾಡಿದೆ.
‘ಒಟ್ಟು 4,204 ಜಾಗಕ್ಕೆ ಸಂಬಂಧಿಸಿದ ಪಹಣಿಗಳಲ್ಲಿ ಪರಭಾರೆ ನಿಷೇಧ ಎಂದು ನಮೂದಿಸಲಾಗಿದೆ. ಆದರೆ, ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಮಾತ್ರ ಯಾವುದೇ ಕ್ರಮವಾಗಿಲ್ಲ ಏಕೆ’ ಎಂಬ ಪ್ರಶ್ನೆ ರೈತ ಮುಖಂಡರಲ್ಲಿದೆ.
ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಖ್ಯೆಯೇ ಹೆಚ್ಚು. 104 ಗ್ರಾಮ ಆಡಳಿತಾಧಿಕಾರಿಗಳ ಹೆಸರುಗಳಿವೆ. ಅದರಲ್ಲೂ ಕಡೂರು ತಾಲ್ಲೂಕಿನಲ್ಲೇ 57 ಜನರ ಹೆಸರಿಸಿದೆ. ಅಷ್ಟೂ ಗ್ರಾಮ ಆಡಳಿತಾಧಿಕಾರಿಗಳು ಬಹುತೇಕ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಒಂದಿಬ್ಬರು ವಯೋನಿವೃತ್ತಿ ಹೊಂದಿದ್ದರೆ, ಉಳಿದವರನ್ನು ಅದೇ ಸ್ಥಾನಗಳಲ್ಲಿ ಉಳಿಸಲಾಗಿದೆ.
18 ಶಿರಸ್ತೆದಾರರು, 48 ಕಂದಾಯ ನಿರೀಕ್ಷರು, 36 ಕಚೇರಿ ಕಂದಾಯ ನಿರೀಕ್ಷಕರು, 35 ವಿಷಯ ನಿರ್ವಾಹಕರು(ಕೇಸ್ ವರ್ಕರ್), 26 ಭೂಮಿ ಆಪರೇಟರ್‌ಗಳು, 36 ಭೂಮಾಪಕರು ಕೂಡ ಹೊಣೆಗಾರರ ಪಟ್ಟಿಯಲ್ಲಿದ್ದಾರೆ.
ಅಕ್ರಮ ಭೂಮಂಜೂರಾತಿ ಬಯಲಿಗೆ ಬಂದ ಬಳಿಕ ನಮೂನೆ 50, 53 ಮತ್ತು 57ರಲ್ಲಿ ಭೂಮಂಜೂರಾತಿ ಕೋರಿರುವ ಅರ್ಜಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಮತ್ತೆ ಅಕ್ರಮ ಆಗದಂತೆ ತಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅದೇ ಗ್ರಾಮ ಆಡಳಿತಾಧಿಕಾರಿ ಮತ್ತು ಇತರ ಸಿಬ್ಬಂದಿಗಳನ್ನು ಅದೇ ಸ್ಥಳದಲ್ಲಿ ಮುಂದುವರಿಸಿದರೆ ಜನರಿಗೆ ನ್ಯಾಯ ಸಿಗುವುದೇ ಎಂಬುದು ರೈತರ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.