
ಮೂಡಿಗೆರೆ: ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಾಹಿತಿ ಮೇಕನಗದ್ದೆ ಲಕ್ಷ್ಮಣಗೌಡ ಹೇಳಿದರು.
ತಾಲ್ಲೂಕಿನ ಅಡ್ಡಗುಡ್ಡೆ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋಣಿಬೀಡು ಹೋಬಳಿ ಘಟಕ, ಅಡ್ಡಗುಡ್ಡೆ, ಮೂಲಹರಳ್ಳಿ ಹಾಗೂ ಗುತ್ತಿಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಏರ್ಪಡಿಸಿದ್ದ ‘ಕನ್ನಡ ಹಳ್ಳಿ ಹಬ್ಬ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಹಾಗೂ ಸಾಹಿತ್ಯ ಪರ್ವ ಕಾಲದಲ್ಲಿದ್ದು, ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಕೊಡುಗೆ ಅಪಾರವಾಗಿದೆ. ಆಧುನಿಕತೆಯ ಭರಾಟೆಗೆ ಸಿಲುಕಿ ನಮ್ಮ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ನಲುಗಿ ಹೋಗುತ್ತಿದೆ. ಭತ್ತ ಬೆಳೆಯುವುದನ್ನು ಬಹುತೇಕ ಕಡೆ ನಿಲ್ಲಿಸಲಾಗಿದ್ದು, ಇದರೊಂದಿಗೆ ನಮ್ಮ ಜಾನಪದ ಸೊಗಡಿನ ಹಾಡುಗಳು, ಪದಗಳು, ಪದ್ಧತಿಗಳು ನೇಪಥ್ಯಕ್ಕೆ ಸರಿದುಹೋಗಿವೆ. ನಮ್ಮ ಮಕ್ಕಳಿಗೆ ಇವ್ಯಾವುದರ ಪರಿಚಯವೇ ಆಗುತ್ತಿಲ್ಲ. ಸಹಬಾಳ್ವೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಮಾತನಾಡಿ, ‘ಗ್ರಾಮಾಂತರ ಪ್ರದೇಶದ ಜನರು ಒಂದೆಡೆ ಕಲೆತು, ಸಂಭ್ರಮದಿಂದ ಕನ್ನಡ ಹಬ್ಬವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಯುವಜನರು ನಮ್ಮ ಭಾಷೆ–ಸಾಹಿತ್ಯ ಬಗ್ಗೆ ಅಭಿಮಾನ, ಆಸಕ್ತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯ’ ಎಂದರು.
ಕಸಾಪ ಗೋಣಿಬೀಡು ಹೋಬಳಿ ಘಟಕದ ಅಧ್ಯಕ್ಷ ನವೀನ್ ಆನೆದಿಬ್ಬ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ತಾಲ್ಲೂಕು ಘಟಕ, ಗೋಣಿಬೀಡು ಹೋಬಳಿ ಘಟಕದ ಪದಾಧಿಕಾರಿಗಳು, ಊರುಬಗೆ, ತ್ರಿಪುರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು.
ಹಳ್ಳಿ ಹಬ್ಬದಲ್ಲಿ ಕವಿಗೋಷ್ಠಿ, ಆಶುಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮದ ಹಿರಿಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕನ್ನಡ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಆಕರ್ಷಕ ಮೆರವಣಿಗೆ ನಡೆಸಲಾಯಿತು. ಗ್ರಾಮದ ಯುವಕರು, ಯುವತಿಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭಾಷಾಭಿಮಾನವನ್ನು ಮೆರೆದರು.
Highlights - ಕನ್ನಡ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಆಕರ್ಷಕ ಮೆರವಣಿಗೆ ಕವಿಗೋಷ್ಠಿ, ಆಶುಭಾಷಣ, ರಂಗೋಲಿ ಸ್ಪರ್ಧೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.