ADVERTISEMENT

ಎಸಿಯಿಂದ ನಿಂದನೆ ಆರೋಪ: ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:21 IST
Last Updated 23 ಜನವರಿ 2025, 14:21 IST

ಚಿಕ್ಕಮಗಳೂರು: ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ವಕೀಲರೊಬ್ಬರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪದಿಂದ ಗುರುವಾರ ಹೊರಗುಳಿದು ಪ್ರತಿಭಟನೆ ನಡೆಸಿದರು.

ತರೀಕೆರೆ, ಚಿಕ್ಕಮಗಳೂರು, ಕಡೂರು, ಮೂಡಿಗೆರೆಯಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ಜಿಲ್ಲಾ ವಕೀಲರ ಸಂಘ ಮತ್ತು ತರೀಕೆರೆ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಉಪವಿಭಾಗಾಧಿಕಾರಿಗೆ ತಲುಪಿಸಲು ಕಡೂರಿನ ವಕೀಲ ಹರೀಶ್ ಬುಧವಾರ ಸಂಜೆ ತೆರಳಿದ್ದರು. ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶ ಕಾನೂನಿಗೆ ವಿರುದ್ಧವಾಗಿದೆ ಎಂದು ಹರೀಶ್ ಅವರ ಕಕ್ಷಿದಾರರು ಮುಖ್ಯಮಂತ್ರಿಗೆ ದೂರು ‌ನೀಡಿದ್ದರು. ಈ ವಿಷಯ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ADVERTISEMENT

‘ಹೈಕೋರ್ಟ್ ಆದೇಶದ ಪ್ರತಿಯನ್ನು ಮುಖದ ಮೇಲೆ ಎಸೆದು ಅವಾಚ್ಯವಾಗಿ ನಿಂದಿಸಿದರು. ಮೊಬೈಲ್ ಪೋನ್ ಕಸಿದುಕೊಂಡರು. ಬೇರೆ ವ್ಯಕ್ತಿಗಳನ್ನು ಕಚೇರಿಗೆ ಕರೆಸಿಕೊಂಡು ಬೆದರಿಸಿದರು. ಪೊಲೀಸರನ್ನೂ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದರು’ ಎಂದು ವಕೀಲ ಹರೀಶ್ ಜಿಲ್ಲಾಧಿಕಾರಿಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.