ADVERTISEMENT

ವಿಧಾನ ಪರಿಷತ್: ಮರು ಎಣಿಕೆ ಇಂದು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 22:34 IST
Last Updated 27 ಫೆಬ್ರುವರಿ 2025, 22:34 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆದು ಮೂರು ವರ್ಷಗಳ ಬಳಿಕ ಮತಗಳ ಮರು ಎಣಿಕೆಗೆ ಶುಕ್ರವಾರ ನಡೆಯಲಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ.

ADVERTISEMENT

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ 2021ರ ಡಿಸೆಂಬರ್‌ 10ರಂದು ಮತದಾನ ನಡೆದಿತ್ತು. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತದಾನ ಮಾಡಿದ್ದರು.

2021ರ ಡಿಸೆಂಬರ್ 14ರಂದು ಮತ ಎಣಿಕೆ ನಡೆದಿತ್ತು. ಚಲಾವಣೆಯಾಗಿದ್ದ 2,410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಬಾಕಿ 2,371 ಮತಗಳು ಸಿಂಧುವಾಗಿದ್ದವು. ಅವುಗಳ ಪೈಕಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ (ಹಾಲಿ ಉಪಸಭಾಪತಿ) ಅವರು 1,188 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1,182 ಮತಗಳನ್ನ ಪಡೆದಿದ್ದರು. ಪ್ರಾಣೇಶ್‌ ಅವರು ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಅಂದಿನ ಚುನಾವಣಾಧಿಕಾರಿ ಘೋಷಣೆ ಮಾಡಿದ್ದರು.

ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರ ಪಟ್ಟಣ ಪಂಚಾಯಿತಿಗಳ ಒಟ್ಟು 12 ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು. ಅವರಿಗೆ ಮತದಾನ ಮಾಡಲು ಅವಕಾಶ ಇಲ್ಲ ಎಂದು ಗಾಯತ್ರಿ ಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. 12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ ವರದಿ ಕಳುಹಿಸುವಂತೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಸೂಚನೆ ನೀಡಿವೆ.

ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ಐಎಎಸ್ ಅಧಿಕಾರಿ ಉಜ್ವಲ್‌ ಕುಮಾರ್ ಘೋಷ್ ಅವರು ಬಂದಿದ್ದಾರೆ.

‘ನ್ಯಾಯಾಲಯದ ಆದೇಶದ ಮೇರೆಗೆ ನಡೆಯುವ ಮತ ಎಣಿಕೆ ಆಗಿರುವುದರಿಂದ ಎಣಿಕೆ ಕಾರ್ಯ ಪೂರ್ಣಗೊಳಿಸಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುವುದು. ಫಲಿತಾಂಶ ಘೋಷಣೆ ಮಾಡುವ ಅಧಿಕಾರ ನಮಗೆ ಇಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಹೆಚ್ಚಿದ ಕುತೂಹಲ

ನ್ಯಾಯಾಲಯದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಮರು ಎಣಿಕೆ ಆಗಿರುವುದರಿಂದ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 12 ಮಂದಿ ನಾಮ ನಿರ್ದೇಶಿತ ಮತದಾರರು ಯಾರಿಗೆ ಮತ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ‘ಆಗ ಬಿಜೆಪಿ ಅಧಿಕಾರದಲ್ಲಿತ್ತು. ಸರ್ಕಾರ ನೇಮಕ ಮಾಡಿದ್ದ ಸದಸ್ಯರಾಗಿರುವುದರಿಂದ ಬಿಜೆಪಿಗೆ ಮತ ಹಾಕಿರಬಹುದು. ಆ ಮತಗಳನ್ನು ಬೇರ್ಪಡಿಸಿ ಎಣಿಕೆ ಮಾಡಿದರೆ ಗಾಯತ್ರಿ ಶಾಂತೇಗೌಡ ಅವರು ಆರು ಮತಗಳಿಂದ ಗೆಲ್ಲಲಿದ್ದಾರೆ’ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸ.

‘ನಾಮ ನಿರ್ದೇಶಿತ ಸದಸ್ಯರು ಬೇರೆಯವರಿಗೂ ಮತ ಹಾಕಿರಬಹುದು. ಆದ್ದರಿಂದ ಎರಡು– ಮೂರು ಮತಗಳಿಂದಾದರೂ ಎಂ.ಕೆ.ಪ್ರಾಣೇಶ್ ಅವರೇ ಗೆಲುವು ಸಾಧಿಸಲಿದ್ದಾರೆ’ ಎಂಬುದು ಬಿಜೆಪಿ ಕಾರ್ಯಕರ್ತರ ನಂಬಿಕೆ. ನ್ಯಾಯಾಲಯಗಳು ವಿಚಾರಣೆ ಪೂರ್ಣಗೊಳಿಸಿ ಆದೇಶ ಹೊರಡಿಸಿದ ಬಳಿಕವೇ ಎಲ್ಲರ ಕುತೂಹಲಕ್ಕೆ ತೆರೆ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.