ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದಿದ್ದ ಚುನಾವಣೆಯ ಮತಗಳ ಮರು ಎಣಿಕೆಗೆ ಕಾರ್ಯ ಶುಕ್ರವಾರ ತಡರಾತ್ರಿ ತನಕವೂ ನಡೆಯಿತು.
ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ಆರಂಭವಾಗಿದ್ದ ಮತ ಎಣಿಕೆ ರಾತ್ರಿ 9ರ ವರೆಗೂ ಪೂರ್ಣಗೊಂಡಿರಲಿಲ್ಲ. ಎಣಿಕಾ ಕೇಂದ್ರಕ್ಕೆ ಅಭ್ಯರ್ಥಿಗಳು, ಅವರ ಏಜೆಂಟರು, ಎಣಿಕಾ ಸಿಬ್ಬಂದಿ ಹೊರತುಪಡಿಸಿ ಬೇರೆಯವರ ಪ್ರವೇಶಕ್ಕೆ ಅವಕಾಶ ಇರಲಿಲ್ಲ.
ಪೊಲೀಸರು ಕಾಲೇಜಿನ ಸುತ್ತಲೂ ಬಿಗಿ ಭದ್ರತೆ ಒದಗಿಸಿದ್ದರು. ಎದುರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು ಎಣಿಕಾ ಕೇಂದ್ರದ ಬಳಿ ಕಾಣಿಸಲಿಲ್ಲ.
2021ರ ಡಿಸೆಂಬರ್ 10ರಂದು ಮತದಾನ ನಡೆದಿತ್ತು. 2021ರ ಡಿಸೆಂಬರ್ 14ರಂದು ಮತ ಎಣಿಕೆ ನಡೆದಿತ್ತು. ಬಿಜೆಪಿಯ ಎಂ.ಕೆ.ಪ್ರಾಣೇಶ್ ಆರು ಮತಗಳಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರ ಪಟ್ಟಣ ಪಂಚಾಯಿತಿಗಳ ಒಟ್ಟು 12 ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು. ಅವರಿಗೆ ಮತದಾನ ಮಾಡಲು ಅವಕಾಶ ನೀಡಿರುವುದನ್ನು ಗಾಯತ್ರಿ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮತಗಳ ಮರು ಎಣಿಕೆ ಮಾಡಿ ವರದಿ ಕಳುಹಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೂಚನೆ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.