ಚಿಕ್ಕಮಗಳೂರು: ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆದು ಮೂರು ವರ್ಷಗಳ ಬಳಿಕ ಮತಗಳ ಮರು ಎಣಿಕೆಗೆ ಜಿಲ್ಲಾಡಳಿತದಿಂದ ತಯಾರಿ ನಡೆದಿದೆ. ಹೈಕೋರ್ಟ್ ಆದೇಶದ ಮೇರೆಗೆ ಮರು ಎಣಿಕೆ ಕಾರ್ಯ ನಡೆಯಲಿದ್ದು, ಒಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ 2021ರ ಡಿಸೆಂಬರ್ 10ರಂದು ಮತದಾನ ನಡೆದಿತ್ತು. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತದಾನ ಮಾಡಿದ್ದರು.
2021ರ ಡಿಸೆಂಬರ್ 14ರಂದು ಮತ ಎಣಿಕೆ ನಡೆದಿತ್ತು. ಚಲಾವಣೆಯಾಗಿದ್ದ 2,410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಬಾಕಿ 2,371 ಮತಗಳು ಸಿಂಧುವಾಗಿದ್ದವು. ಅವುಗಳ ಪೈಕಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು 1,188 ಮತಗಳನ್ನು ಪಡೆದ್ದರೆ, ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1,182 ಮತಗಳನ್ನು ಪಡೆದಿದ್ದರು. ಪ್ರಾಣೇಶ್ ಅವರು ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದರು.
ಅಲ್ಪ ಮತಗಳ ಅಂತರದಲ್ಲಿ ಹಿನ್ನಡೆಯಾಗಿದ್ದ ಗಾಯತ್ರಿ ಅವರು ಮರು ಎಣಿಕೆಗೆ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದ್ದರು. ಚುನಾವಣಾ ಆಯೋಗದ ಸೂಚನೆಯಂತೆ ಫಲಿತಾಂಶ ಪ್ರಕಟಿಸಿ, ಪ್ರಾಣೇಶ್ ಗೆಲುವು ಸಾಧಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಘೋಷಿಸಿದ್ದರು.
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಪಟ್ಟಣ ಪಂಚಾಯಿತಿಗಳ ಒಟ್ಟು 12 ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು. ಅವರಿಗೆ ಮತದಾನ ಮಾಡಲು ಅವಕಾಶ ಇಲ್ಲ ಎಂದು ಗಾಯತ್ರಿ ಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. 12 ಸದಸ್ಯರ ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ ವರದಿ ಕಳಹಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.
30 ದಿನಗಳಲ್ಲಿ ಮರು ಎಣಿಕೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಿದ್ದು, ಫೆ.27ರೊಳಗೆ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಒಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ವಿಧಾನ ಪರಿಷತ್ ಚುನಾವಣೆ ಆಗಿರುವುದರಿಂದ ವಿದ್ಯುನ್ಮಾನ ಮತಯಂತ್ರ ಬಳಸಿರಲಿಲ್ಲ. ಮತಪತ್ರಗಳು ಖಜಾನೆಯಲ್ಲಿ ಭದ್ರವಾಗಿದ್ದು, ಅವುಗಳನ್ನು ಮತ್ತೆ ತೆಗೆದು ಎಣಿಕೆ ಮಾಡಬೇಕಿದೆ. ಮತ ಎಣಿಕೆ ಪೂರ್ಣಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಲಿದೆ. ವಿಜೇತರು ಯಾರು ಎಂಬುದನ್ನು ಹೈಕೋರ್ಟ್ ಮುಂದಿನ ಆದೇಶದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬುದು ಮೂಲಗಳ ಮಾಹಿತಿ.
ಮೂರು ವರ್ಷಗಳ ಹಿಂದೆ ವಿಜೇತರು ಎಂದು ಘೋಷಣೆಯಾಗಿರುವ ಎಂ.ಕೆ.ಪ್ರಾಣೇಶ್ ಅವರು ಸದ್ಯ ವಿಧಾನ ಪರಿಷತ್ ಉಪಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮರು ಮತ ಎಣಿಕೆ ಕಾರ್ಯ ಹೇಗೆ ನಡೆಸಬೇಕು ಎಂಬುದರ ಕುರಿತು ಚುನಾವಣಾ ಆಯೋಗದ ಮಾರ್ಗಸೂಚಿಗಾಗಿ ಜಿಲ್ಲಾಡಳಿತ ಕಾದಿದೆ. ಫಲಿತಾಂಶ ಘೋಷಣೆಯಾಗಿ ಮೂರು ವರ್ಷಗಳ ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮರು ಎಣಿಕೆ ನಡೆಯುತ್ತಿರುವುದು ವಿಶೇಷ. ಯಾವ ಮಾರ್ಗಸೂಚಿ ಪಾಲಿಸಬೇಕು ಎಂಬುದರ ಕುರಿತು ಚುನಾವಣಾ ಆಯೋಗದ ಮಾರ್ಗದರ್ಶನ ಮುಖ್ಯ ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ. ಮಾರ್ಗಸೂಚಿ ಬಂದ ಕೂಡಲೇ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ವಾರದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಲಿದೆ. ಶುಕ್ರವಾರ ಬೆಳಿಗ್ಗೆ ವೇಳೆಗೆ ಮಾರ್ಗಸೂಚಿ ದೊರಕಲಿದ್ದು ಬಹುತೇಕ ಸಂಜೆ ವೇಳೆಗೆ ಎಲ್ಲಾ ಅಭ್ಯರ್ಥಿಗಳಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿವೆ. ಕಾಂಗ್ರೆಸ್‌ನಿಂದ ಎ.ವಿ.ಗಾಯತ್ರಿ ಶಾಂತೇಗೌಡ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್ ಆಮ್ ಆದ್ಮಿ ಪಕ್ಷದಿಂದ ಡಾ.ಕೆ.ಸುಂದರಗೌಡ ಪಕ್ಷೇತರರಾಗಿ ಬಿ.ಟಿ.ಚಂದ್ರಶೇಖರ ಜಿ.ಐ.ರೇಣುಕುಮಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಎಲ್ಲರಿಗೂ ನೋಟಿಸ್ ಜಾರಿಯಾಗಲಿದ್ದು ಅಭ್ಯರ್ಥಿಗಳ ಸಮ್ಮುಖದಲ್ಲೇ ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.