
ಚಿಕ್ಕಮಗಳೂರು: ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳು ಪುಸ್ತಕ ಸ್ನೇಹಿಗಳಾಗಬೇಕು. ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಗ್ರಂಥಾಲಯಗಳಲ್ಲಿ ದೊರೆಯುವ ಪುಸ್ತಕಗಳು ಬದುಕಿಗೆ ಹೊಸ ಮಾರ್ಗ ನೀಡಲಿದೆ ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಹೊಸಮನೆ ಬಡಾವಣೆ ಸಮೀಪದ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಸಾರ್ವಜನಿಕರ ಓದಿಗೆ ಗುಣಮಟ್ಟದ ಗ್ರಂಥಾಲಯ ಕಟ್ಟಡ ಸೇರಿ ಸ್ವಚ್ಛಂದ ವಾತಾವರಣ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ದೇಶದ ಖ್ಯಾತ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯ ಪುಸ್ತಕಗಳನ್ನು ಅಡಕಗೊಳಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಅವಶ್ಯಕತೆ ಇರುವ ಮೂಲ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲಾಗುವುದು. ದೇಶದ ಮುಂದಿನ ಯುವ ಪ್ರಜೆಗಳನ್ನು ಸಮಾಜದ ಮುಂಚೂಣಿಗೆ ಒಯ್ಯುವುದೇ ಪ್ರಮುಖ ಧ್ಯೇಯ ಎಂದು ಹೇಳಿದರು.
ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ‘ಗ್ರಂಥಾಲಯಗಳು ಜ್ಞಾನ ಉಣಬಡಿಸುವ ಕೇಂದ್ರಗಳು. ಕನಿಷ್ಠ ದಿನದ ಒಂದು ಗಂಟೆಗಳ ಕಾಲ ಬಿಡುವು ಮಾಡಿಕೊಂಡು ಗ್ರಂಥಾಲಯಕ್ಕೆ ತೆರಳಿ ದಿನ ಪತ್ರಿಕೆ, ಪುಸ್ತಕಗಳು ಓದುವ ಅಭ್ಯಾಸಿವಿರಬೇಕು. ಇದು ಸಮಾಜದ ಆಗು-ಹೋಗುಗಳನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಇಂದಿನಿಂದ ನ. 20ರವರೆಗೆ ಸಪ್ತಾಹ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ, ಚಿತ್ರಕಲೆ ಸ್ಪರ್ಧೆ ಹಾಗೂ ಗ್ರಂಥಾಲಯ ಮಹತ್ವ ಕುರಿತು ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು’ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಲಲಿತಾ ನಾಯ್ಕ, ಸದಸ್ಯೆ ಸುಜಾತಾ ಶಿವಕುಮಾರ್, ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಮುಖ್ಯಸ್ಥ ತುಳಸಿದಾಸ್, ಗ್ರಂಥಾಲಯ ಸಿಬ್ಬಂದಿ ರಾಘವೇಂದ್ರ, ರೂಪಾ, ಶಂಕರೇಗೌಡ, ಸಿದ್ದೇಗೌಡ, ಸೌಮ್ಯಾ, ಕೃಪಾ, ಕೆ.ಬಿ.ವೀಣಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.