ADVERTISEMENT

ಅಂಗಡಿ, ಸಾರಿಗೆ ಬಸ್‌ ಅಣಿ

ಕಾಫಿನಾಡು: ಇಂದಿನಿಂದ ಲಾಕ್‌ಡೌನ್‌ ಸಡಿಲ

​ಪ್ರಜಾವಾಣಿ ವಾರ್ತೆ
Published 3 ಮೇ 2020, 15:54 IST
Last Updated 3 ಮೇ 2020, 15:54 IST
ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಭಾನುವಾರ ಪೂರ್ವ ಸಿದ್ಧತಾ ಚಟುವಟಿಕೆಗಳು ನಡೆದವು.
ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಭಾನುವಾರ ಪೂರ್ವ ಸಿದ್ಧತಾ ಚಟುವಟಿಕೆಗಳು ನಡೆದವು.   

ಚಿಕ್ಕಮಗಳೂರು: ಕಾಫಿನಾಡು ಹಸಿರು ವಲಯದ ಪಟ್ಟಿಯಲ್ಲಿದ್ದು, ಇದೇ 4ರಿಂದ ಲಾಕ್‌ಡೌನ್‌ ಸಡಿಲ ನಿಟ್ಟಿನಲ್ಲಿ ಭಾನುವಾರ ಪೂರ್ವಸಿದ್ಧತೆ ಚಟುವಟಿಕೆಗಳು ನಡೆದವು. ಅಂಗಡಿ–ಮಳಿಗೆ ಸ್ವಚ್ಛತೆ, ಕೆಎಸ್‌ಆರ್‌ಟಿಸಿ ನಿಲ್ದಾಣ, ಬಸ್‌ಗಳು, ಸಿಬ್ಬಂದಿ ಅಣಿ ಕಾರ್ಯಗಳು ಜರುಗಿದವು.

ನಗರದ ಐ.ಜಿ ರಸ್ತೆ, ಎಂ.ಜಿ ರಸ್ತೆ, ಮಾರುಕಟ್ಟೆ ರಸ್ತೆ ಸಹಿತ ಪ್ರಮುಖ ರಸ್ತೆಗಳ ಹಲವು ಅಂಗಡಿಗಳಲ್ಲಿ ಸ್ವಚ್ಛತೆ, ಸಾಮಾನು ಜೋಡಣೆ, ಅಂಕ ಬರೆಯುವುದು ಮೊದಲಾದ ಕಾರ್ಯಗಳು ನಡೆದವು. ಲಾಕ್‌ಡೌನ್‌ ಸಡಿಲ ಮಾಡುವುದು ಜನರಲ್ಲಿ ಖುಷಿ ಮೂಡಿಸಿದೆ.

ಲಾಕ್‌ಡೌನ್‌ ಸಡಿಲವು ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಅನ್ವಯವಾಗಲಿದೆ. ಅಂತರ ಕಾಪಾಡುವುದು, ಮಾಸ್ಕ್‌ ಧಾರಣೆ ಕಡ್ಡಾಯಗೊಳಿಸಲಾಗಿದೆ.

ADVERTISEMENT

ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಂತರ ನಿರ್ವಹಣೆ ನಿಟ್ಟಿನಲ್ಲಿ ಅಂಕಗಳನ್ನು ಬರೆಯಲಾಗಿದೆ. ನಿಲ್ದಾಣದಲ್ಲಿ ಸ್ವಚ್ಛತೆ ನಿಟ್ಟಿನಲ್ಲಿ ಆದ್ಯ ಗಮನ ಹರಿಸಲಾಗಿದೆ. ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್‌ಗಳನ್ನು ಇಡಲು ವ್ಯವಸ್ಥೆ ಮಾಡಲಾಗಿದೆ.

‘ಚಾಲಕರು, ನಿರ್ವಾಹಕ, ನೌಕರರ ಆರೋಗ್ಯ ತಪಾಸಣೆ ಮಾಡಲಾಗಿದೆ. ಬಸ್‌ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಶುದ್ಧೀಕರಣ ಮಾಡಲಾಗಿದೆ. ಪ್ರತಿ ನಿಲ್ದಾಣದಲ್ಲಿ ಸ್ಯಾನಿಟೈಸರ್‌ ಇಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ತಾಲ್ಲೂಕು ಕೇಂದ್ರಗಳಿಗೆ ಬಸ್‌ಗಳು ಹೊರಡಲಿವೆ. ಪ್ರತಿಗಂಟೆಗೆ ಒಂದು ಹೊರಡುತ್ತದೆ. ಒಂದು ಬಸ್‌ನಲ್ಲಿ 27 ಮಂದಿ ಪ್ರಯಾಣಿಸಬಹುದು. ಪ್ರಯಾಣಿಕರು ಆಧಾರ್‌, ಮತದಾರರ ಗುರುತಿನ ಚೀಟಿ, ಇತರ ಯಾವುದಾದರೊಂದು ಗುರುತಿನ ಪತ್ರ ತರಬೇಕು’ ಎಂದರು.

ಹೋಟೆಲ್‌, ಕ್ಯಾಂಟೀನ್‌ನವರು ಪಾರ್ಸೆಲ್‌ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ ಸಡಿಲದಿಂದ ಚಟುವಟಿಕೆಗಳು ಚೇತರಿಕೆಯಾಗುವ ನಿರೀಕ್ಷೆ ಇದೆ.

ದಾಸ್ತಾನು ಪರಿಶೀಲನೆ

ಜಿಲ್ಲೆಯ ಮದ್ಯದಂಗಡಿಗಳಲ್ಲಿ ದಾಸ್ತಾನು ಪರಿಶೀಲನೆ ಕಾರ್ಯ ಇದೇ 3ರಿಂದ ಶುರುವಾಗಿದೆ. ನಗರದ ಅಂಗಡಿಗಳಲ್ಲಿ ಭಾನುವಾರವೂ ಅಧಿಕಾರಿಗಳು ದಾಸ್ತಾನು ಪರಿಶೀಲನೆ ಮಾಡಿದರು.

‘ಜಿಲ್ಲೆಯಲ್ಲಿ ಸೋಮವಾರದಿಂದ 100 ಮದ್ಯದಂಗಡಿಗಳು (ಎಂಎಸ್‌ಐಎಲ್‌–24 ಮತ್ತು ಖಾಸಗಿ–76) ತೆರೆಯಲಿವೆ. ಒಬ್ಬರಿಂದ ಮತ್ತೊಬ್ಬರ ನಡುವೆ ಆರು ಅಡಿ ಅಂತರ ಕಾಪಾಡಬೇಕು. ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯ. ಅಂಗಡಿ ಮುಂದೆ ಒಮ್ಮೆಗೆ ಐವರಿಗಿಂತ ಹೆಚ್ಚು ಮಂದಿ ಜಮಾಯಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ’ ಎಂದು ಅಬಕಾರಿ ಉಪ ಆಯುಕ್ತ ಮೊಸೆಸ್‌ ಸಾಮ್ಯುಯೆಲ್‌ ತಿಳಿಸಿದರು.

ಅಂಗಡಿ, ಬಸ್‌ ನಿಲ್ದಾಣ, ಇತರ ಯಾವುದೇ ಕಡೆ ಜನ ದಟ್ಟಣೆಯಾಗದಂತೆ ನಿಯಂತ್ರಿಸಲು ಪೊಲೀಸರು ನಿಗಾ ವಹಿಸಲು ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.