ADVERTISEMENT

ಸೇನಾ ಸಿಬ್ಬಂದಿ ನೂತನ ಉಪಮುಖ್ಯಸ್ಥರಾಗಿ ಬಿ.ಎಸ್‌.ರಾಜು ಅಧಿಕಾರ ಸ್ವೀಕಾರ ಇಂದು

ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿಯವರು

​ಪ್ರಜಾವಾಣಿ ವಾರ್ತೆ
Published 1 ಮೇ 2022, 5:50 IST
Last Updated 1 ಮೇ 2022, 5:50 IST
ಬಿ.ಎಸ್‌.ರಾಜು (ಸಂಗ್ರಹ ಚಿತ್ರ)
ಬಿ.ಎಸ್‌.ರಾಜು (ಸಂಗ್ರಹ ಚಿತ್ರ)   

ಚಿಕ್ಕಮಗಳೂರು: ಸೇನಾ ಸಿಬ್ಬಂದಿಯ ನೂತನ ಉಪಮುಖ್ಯಸ್ಥರಾಗಿ ಬಿ.ಎಸ್‌. ರಾಜು ಅವರು ಮೇ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜು ಅವರು ಅಜ್ಜಂಪುರ ತಾಲ್ಲೂಕಿನ ಬಗ್ಗವಳ್ಳಿಯವರು.

ಲೆಫ್ಟಿನೆಂಟ್‌ ಮನೋಜ್‌ ಪಾಂಡೆ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ರಾಜು ಅವರು 38 ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇನೆಯಲ್ಲಿ ಅಪ್ರತಿಮ ಕಾರ್ಯನಿರ್ವಹಣೆಗೆ ‘ಉತ್ತಮ ಯುದ್ಧ ಸೇವಾ ಪದಕ’ ಈಚೆಗೆ ಸಂದಿತ್ತು.

ರಾಜು ಅವರು ಸೋಮಶೇಖರ್‌ ಮತ್ತು ವಿಮಲಾ ದಂಪತಿಯ ಪುತ್ರ. ಕಲುಬುರಗಿ, ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ವಿಜಯಪುರ ಸೈನಿಕ ಶಾಲೆಯಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಿಯು ಶಿಕ್ಷಣ ಪಡೆದರು. ನಂತರ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪದವಿ, ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ.

ADVERTISEMENT

1984ರಲ್ಲಿ ಜಾಟ್‌ ರೆಜಿಮೆಂಟ್‌ನಲ್ಲಿ ಆಯ್ಕೆಯಾಗಿ ಸೇನೆಗೆ ಸೇರಿದರು. ಡೆಹ್ರಾಡೂನ್‌, ಜಮ್ಮು – ಕಾಶ್ಮೀರ, ನವದೆಹಲಿ ಸಹಿತ ವಿವಿಧೆಡೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ರಾಜು ಅವರಿಗೆ ‘ಅತಿ ವಿಶಿಷ್ಟ ಸೇವಾ ಪದಕ’ ಸಹಿತ ಹಲವು ಪುರಸ್ಕಾರಗಳು ಸಂದಿವೆ. ಅವರಿಗೆ ಪತ್ನಿ ಶಕುಂತಲಾ. ಪುತ್ರ ಶೇಖರ್‌, ಪುತ್ರಿ ಪೂರ್ವಿ ಇದ್ದಾರೆ.

‘ದೊಡಪ್ಪ ರಾಜು ಸೇನೆಯಲ್ಲಿ ದೊಡ್ಡ ಹುದ್ದೆಗೆ ಏರಿರುವುದು ಖುಷಿ ತಂದಿದೆ. ಅವರು ಆರು ತಿಂಗಳು, ವರ್ಷಕ್ಕೊಮ್ಮೆ ಊರಿಗೆ ಬರುತ್ತಾರೆ. ಬಗ್ಗವಳ್ಳಿ ಎಂದರೆ ಅವರಿಗೆ ಇಷ್ಟ’ ಎಂದು ಬಗ್ಗವಳ್ಳಿಯ ಯಶವಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.