ADVERTISEMENT

ಬೀರೂರು | ಮದಗದ ಕೆರೆಗೆ ನೀರು: ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 13:45 IST
Last Updated 27 ಜುಲೈ 2024, 13:45 IST
 ಮದಗದಕೆರೆಯ ಕಾಲುವೆ ಮೂಲಕ ಹರಿಯುವ ನೀರು ಶನಿವಾರ ತೋಟಗಳಿಗೆ ನುಗ್ಗಿತು
 ಮದಗದಕೆರೆಯ ಕಾಲುವೆ ಮೂಲಕ ಹರಿಯುವ ನೀರು ಶನಿವಾರ ತೋಟಗಳಿಗೆ ನುಗ್ಗಿತು   

ಬೀರೂರು: ತಾಲ್ಲೂಕಿನ ಬೀರೂರು ಹೋಬಳಿ ಎಮ್ಮೆದೊಡ್ಡಿಯ ಮದಗದಕೆರೆಗೆ ಭರಪೂರ ನೀರು ಹರಿದುಬರುತ್ತಿದ್ದು, ಕೆರೆಯ ಹಿಂಭಾಗದಲ್ಲಿರುವ ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ.

ಮದಗದಕೆರೆಗೆ ಶುಕ್ರವಾರ ಕೋಡಿ ಬಿದ್ದಿದ್ದು, ತೂಬಿನಿಂದ ಮೇಲೆ ಸುಮಾರು 2 ಅಡಿ ನೀರು ಹರಿದು ಸರಣಿ ಕೆರೆಗಳಿಗೆ ಹರಿಯುತ್ತಿದೆ. ನೀರಿನ ಹರಿವು ಹೆಚ್ಚಾಗಿದ್ದು, ಎಮ್ಮೆದೊಡ್ಡಿ ಭಾಗದ ಲಕ್ಕೇನಹಳ್ಳಿಯಿಂದ ಮುಂದೆ ರಸ್ತೆ ಕಿತ್ತು ಹೋಗಿದೆ. ಚಿಕ್ಕಲಘಟ್ಟೆ, ಹಳೇ ಸಿದ್ದರಹಳ್ಳಿ, ಹೊಸ ಸಿದ್ದರಹಳ್ಳಿ, ಸಗಣಿಬಸವನ ಹಳ್ಳಿ, ಹಲಸಿನಮರದ ಹಟ್ಟಿ, ಕಲ್ಲು ಹೊಳೆಕೋಟೆ ಭಾಗಗಳ ಸಂಪರ್ಕ ಕಡಿತಗೊಂಡಿದೆ. ಚಿಕ್ಕಂಗಳ ರಸ್ತೆ, ಬುಕ್ಕಸಾಗರ ಸೇತುವೆಗಳ ಬಳಿಯೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಹೋಗುತ್ತಿದ್ದು ಸ್ಥಳೀಯರು, ಪ್ರವಾಸಿಗರು ಕೆರೆ ಕಡೆ ತೆರಳದಂತೆ ಮನವಿ ಮಾಡಿರುವ ಪೊಲೀಸರು ಮುಸಲಾಪುರದ ಹಟ್ಟಿ ಬಳಿ ಬ್ಯಾರಿಕೇಡ್ ಅಳವಡಿಸಿ ಜನಸಂಚಾರಕ್ಕೆ ತಡೆ ಹಾಕಿದ್ದಾರೆ.

ಶನಿವಾರ ಬೆಳಿಗ್ಗೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾಶಂಕರ್ ಮತ್ತು ಕಡೂರು ಪಿಎಸ್‌ಐ ಪವನ್‌ಕುಮಾರ್ ಕೆರೆಯ ಬಳಿ ತೆರಳಿ ಪರಿಸ್ಥಿತಿ ಅವಲೋಕಿಸಿ, ನಾಲೆಗಳೂ ತುಂಬಿ ಹರಿಯುತ್ತಿದ್ದು, ಕೆರೆ ನೋಡಲು ಬರುವವರು ಯಾವುದೇ ದುಸ್ಸಾಹಸಕ್ಕೆ ಮುಂದಾಗದೆ ನೀರಿನ ಹರಿವು ಕಡಿಮೆಯಾಗುವವರೆಗೆ ಇತ್ತ ಓಡಾಡದಿರುವುದು ಒಳ್ಳೆಯದು. ವಾಹನದಲ್ಲಿ ಸಂಚಾರ ಕೂಡ ಅಪಾಯಕಾರಿ’ ಎಂದಿದ್ದಾರೆ.

ADVERTISEMENT

ಶನಿವಾರ ಮಳೆ ಕಡಿಮೆಯಾಗಿದೆ. ಆದರೆ, ಕೆರೆಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ. ಹಲವೆಡೆ ತೋಟಗಳಿಗೂ ನೀರು ನುಗ್ಗಿದೆ. ಕೆರೆ ನೋಡಲು ಬರುವವರನ್ನು ಮುಸಲಾಪುರದ ಬಳಿಯೇ ತಡೆದು ಪೊಲೀಸರು ವಾಪಸ್ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.