
ಕಡೂರು: ಸಿಂಗಟಗೆರೆ ಹೋಬಳಿಯಲ್ಲಿರುವ ಕೆರೆಸಂತೆಯ ಶ್ರೀಮಹಾಲಕ್ಷ್ಮಿ ದೇವಿಯವರ ಮಹಾರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಬೆಳ್ಳಿ–ಬಂಗಾರದ ಕವಚಗಳಿಂದ ಅಲಂಕೃತಗೊಂಡ ಮಹಾಲಕ್ಷ್ಮಿ ದೇವಿಯ ಉತ್ಸವ ಮೂರ್ತಿಯನ್ನು ಹೂವಿನಹಾರ, ಬಾಳೆಕಂದುಗಳಿಂದ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಲಾಯಿತು. ರಥೋತ್ಸವಕ್ಕೆ ಆಹ್ವಾನಿಸಲಾಗಿದ್ದ ಹೇಮಗಿರಿಯ ಶ್ರೀಮಲ್ಲಿಕಾರ್ಜುನ ಸ್ವಾಮಿ, ಜನಾರ್ದನ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಜನಪದ ವಾದ್ಯಮೇಳಗಳ ನಡುವೆ ಕರೆತಂದು ರಥದ ಮುಂದೆ ಸಾಗಿ, ದೇವಾಲಯದ ಪ್ರಾಕಾರದಲ್ಲಿರುವ ಕಾಲಭೈರವೇಶ್ವರ ಮತ್ತು ಶಂಭುಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ, ಜನಾರ್ದನ ಸ್ವಾಮಿ ಅವರನ್ನು ರಥಕ್ಕೆ ಏರಿಸಿದ ಬಳಿಕ ಭಕ್ತರು ಹರ್ಷೋದ್ಗಾರಗಳೊಂದಿಗೆ ರಥವನ್ನು ಎಳೆದರು. ಭಕ್ತರು ಬಾಳೆಹಣ್ಣು, ಹೂವು, ದವನಗಳನ್ನು ರಥಕ್ಕೆ ಎಸೆಯುತ್ತಿದ್ದರೆ ಒಕ್ಕಲು ಮನೆಗಳವರು ರಥಕ್ಕೆ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು.
ಡಿ. 3ರಿಂದ ಪ್ರಾರಂಭಗೊಂಡ ಧಾರ್ಮಿಕ ಪೂಜಾ ಮಹೋತ್ಸವಗಳ ಪ್ರಯುಕ್ತ ದೇವಿಯ ಮೂಲಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಸಂಕಲ್ಪ ಪೂಜೆ, ಬಳಿಕ ರಥೋತ್ಸವದ ಪೂಜಾ ಅನುಷ್ಠಾನ, ರಥ ಸಂಪ್ರೋಕ್ಷಣೆ, ಬಲಿಪ್ರದಾನ, ನೂರೊಂದು ಎಡೆಸೇವೆ ನೆರವೇರಿಸಲಾಯಿತು. ಅವರೋಹಣದ ನಂತರ ದೇವಾಲಯದ ಆವರಣದಲ್ಲಿ ಶ್ರೀಹೇಮಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜನಾರ್ದನ ಸ್ವಾಮಿಯೊಂದಿಗೆ ಮಹಾಲಕ್ಷ್ಮಿ ದೇವಿಯ ಉತ್ಸವ ನಡೆಸಲಾಯಿತು. ವೀರಗಾಸೆ, ಡೊಳ್ಳು ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಾಲ್ಲೂಕು ಆಡಳಿತದ ಪರವಾಗಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನ ಅರ್ಚಕ ನಂಜುಂಡಸ್ವಾಮಿ, ನವೀನ್ ಪುರೋಹಿತ್ ಹಾಗೂ ಆಗಮಿಕ ಪ್ರಭುಸ್ವಾಮಿ ತಂಡದವರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದರೆ, ಗೊರವಯ್ಯಗಳಾದ ಹುಚ್ಚಪ್ಪ ಹಾಗೂ ಮೀಸೆ ಲೋಕೇಶ್ ಅವರು ರಥದ ಬಳಿ ಸಲ್ಲಿಸಿದ ಜಾನಪದ ಶೈಲಿಯ ಪೂಜೆ ಗಮನಾರ್ಹವಾಗಿತ್ತು.
ಐತಿಹ್ಯದಂತೆ ಶ್ರೀಮಹಾಲಕ್ಷ್ಮಿ ದೇವಿಯ ರಥೋತ್ಸವವು ಹೊಯ್ಸಳ ಸಾಮ್ರಾಟ ವಿಷ್ಣುವರ್ಧನ ಹಾಗೂ ಅವರ ಪಟ್ಟದರಾಣಿ ಶಾಂತಲೆಯವರ ಅಣತಿಯಂತೆ ಕ್ರಿ.ಶ.1118ರಿಂದ ನಡೆದು ಬಂದಿದೆ. ಭಕ್ತರು ಹಾಗೂ ಸಮಿತಿಯವರ ಸಹಕಾರದಲ್ಲಿ ಗುರುವಾರ ರಾತ್ರಿ 908ನೇ ವರ್ಷದ ವಿಷ್ಣು ಕಾರ್ತಿಕ ದೀಪೋತ್ಸವ ನಡೆಸಲಾಗಿತ್ತು.
ದೀಪೋತ್ಸವದ ಅಂಗವಾಗಿ ಶುಕ್ರವಾರ ಬೆಳಗಿನ ಜಾವ ಕದಳಿ ಮಂಟಪದಲ್ಲಿ ಅಮ್ಮನವರನ್ನು ಸ್ಥಾಪಿಸಿ ಕದಳಿ ಉತ್ಸವ ನಡೆಸಲಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವು ತಾಲ್ಲೂಕು ಆಡಳಿತದ ನೆರವಿನಿಂದ ಅಭಿವೃದ್ಧಿ ಹೊಂದುತ್ತಿದ್ದು, ಭಕ್ತರ ಸಹಕಾರ ನಿರಂತರವಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್ ತಿಳಿಸಿದರು. ಗ್ರಾಮಸ್ಥರು, ಒಕ್ಕಲುಗಳ ಸಹಕಾರದೊಂದಿಗೆ ದೀಪೋತ್ಸವ ಮತ್ತು ರಥೋತ್ಸವದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.