ADVERTISEMENT

ಮಕ್ಕಳಿಗೆ ಹಕ್ಕು ಮತ್ತು ಕರ್ತವ್ಯಗಳ ಜಾಗೃತಿ ಅಗತ್ಯ

ಮಕ್ಕಳ ಸ್ನೇಹ ಸಪ್ತಾಹದಲ್ಲಿ ಬಸವರಾಜ್ ಚೇಂಗಟಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 12:38 IST
Last Updated 14 ನವೆಂಬರ್ 2019, 12:38 IST
ಚಿಕ್ಕಮಗಳೂರಿನಲ್ಲಿ ನಡೆದ ಮಕ್ಕಳ ಸ್ನೇಹ ಸಪ್ತಾಹವನ್ನು ಗಣ್ಯರು, ಅತಿಥಿಗಳು ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಇದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಮಕ್ಕಳ ಸ್ನೇಹ ಸಪ್ತಾಹವನ್ನು ಗಣ್ಯರು, ಅತಿಥಿಗಳು ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಇದ್ದಾರೆ.   

ಚಿಕ್ಕಮಗಳೂರು: ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮಕ್ಕಳು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಸಲಹೆ ನೀಡಿದರು.

ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ನಗರದ ಸಂತ ಜೋಸೆಫೆರ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಸ್ನೇಹ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳು ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡಾಗ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಸಹಾಯವಾಗುತ್ತದೆ. ಜೀವನದಲ್ಲಿ ಚೈತನ್ಯದಿಂದ ಇರಬೇಕು. ದೇವರನ್ನೇ ಸಿಸಿಟಿವಿ ಕ್ಯಾಮೆರಾ ಎಂದು ಭಾವಿಸಬೇಕು. ಬೇರೆಯರ ಹಕ್ಕುಗಳನ್ನು ಉಲ್ಲಂಘಿಸಬಾರದು. ಸತ್ಯ ನಿಷ್ಠೆಯಿಂದ ಬದುಕು ಸಾಗಿಸಬೇಕು. ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿ ಮಾಹಿತಿ ನೀಡಬೇಕು ಎಂದರು.

ADVERTISEMENT

ಹುಟ್ಟಿನಿಂದ ಯಾರೂ ಮಹಾತ್ಮರಾಗುವುದಿಲ್ಲ. ಅವರ ನಡೆ, ನುಡಿ, ವ್ಯಕ್ತಿತ್ವದಿಂದ ದೊಡ್ಡ ವ್ಯಕ್ತಿಗಳಾಗುತ್ತಾರೆ. ಸಾಲುಮರದ ತಿಮ್ಮಕ್ಕ ವಿದ್ಯಾವಂತೆಯಲ್ಲ ಆದರೂ ಅವರ ಸಮಾಜಮುಖಿ ಕೆಲಸದಿಂದಾಗಿ ಸಾಧನೆ ಮಾಡಿದ್ದಾರೆ. ದೇಶದ ಎತ್ತರ ಮೌಂಟ್ ಎವೆರೆಸ್ಟ್ ಶಿಖರವನ್ನು ಇಂದು ಅಂಗವಿಕಲರು ಸಹ ಹತ್ತುತ್ತಿದ್ದಾರೆ. ಮಕ್ಕಳು ಅವುಗಳಿಂದ ಪ್ರೇರಿತರಾಗಬೇಕು. ಜೀವನದಲ್ಲಿ ಗುರಿ ಹೊಂದಬೇಕು. ಸೂಕ್ಷ್ಮಗ್ರಾಹಿಗಳಾಗುವ ಜತೆಗೆ ಪರಿಶ್ರಮದಿಂದ ಸಾಧನೆ ಮಾಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಮಾತನಾಡಿ, ಬಸ್‌ಗಳಲ್ಲಿ ಪ್ರಯಾಣಿಸುವಾಗ ಸುಖಾಸುಮ್ಮನೇ ಮೇಲೆ ಬೀಳುವುದು, ಸ್ಪರ್ಶಿಸುವವರ ವಿರುದ್ಧ ವಿದ್ಯಾರ್ಥಿನೀಯರು ಧ್ವನಿ ಎತ್ತಬೇಕು. ಅಪರಿಚಿತ ವ್ಯಕ್ತಿಗಳು ಡ್ರಾಪ್ ನೀಡುವುದಾಗಿ ಕರೆದರೆ ಹೋಗಬಾರದು ಎಂದರು.

ಮಕ್ಕಳು ಶಿಸ್ತು ಮತ್ತು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಶಾಲೆ, ಪಿಯುಸಿ ಮಟ್ಟದಲ್ಲಿ ಮೊಬೈಲ್ ಬಳಸಬಾರದು. ಪದವಿ ಶಿಕ್ಷಣಕ್ಕೆ ತೆರಳಿದಾಗ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು. ಎಲ್ಲರನ್ನು ಗೌರವದಿಂದ ಕಾಣಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಸವರಾಜು, ಬಾಲನ್ಯಾಯ ಮಂಡಳಿ ಸದಸ್ಯ ನಟರಾಜ್, ಮುಖ್ಯಶಿಕ್ಷಕಿ ಸಿಸಿಲಿ ಜೋಸೆಫ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಕೆ.ಎನ್.ಜಯಣ್ಣ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಜಾನ್ಸನ್, ಸರ್ವೋದಯ ಸಮಾಜಸೇವಾ ಸಂಸ್ಥೆ ಅಧ್ಯಕ್ಷ ಸಿದ್ದರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.