
ನರಸಿಂಹರಾಜಪುರ: ಮಲೆನಾಡು ಭಾಗದಲ್ಲಿ ವಾಸವಾಗಿರುವ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಹೊಸಹೊಸ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು ಇದರ ವಿರುದ್ಧ ಜಾಗೃತರಾಗದಿದ್ದರೆ ಮಲೆನಾಡು ಉಳಿಯುವುದಿಲ್ಲ ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದರು.
ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಯೋಜಿಸಿರುವ ಮಲೆನಾಡಿಗರ ಬದುಕು ಉಳಿಸಿ ಜನಜಾಗೃತಿ ಯಾತ್ರೆ ಪಟ್ಟಣಕ್ಕೆ ಶನಿವಾರ ತಲುಪಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ಒತ್ತುವರಿ ತೆರವುಗೊಳಿಸಲು ಸರ್ಕಾರ ಚಿಂತಿಸುತ್ತಿದ್ದು ಅದು ಕಾರ್ಯಗತವಾದರೆ ರೈತರು, ವ್ಯಾಪಾರಸ್ಥರು, ಕಾರ್ಮಿಕರ ಬದುಕು ಉಳಿಯುವುದಿಲ್ಲ. ಸಾಗುವಳಿ ಮಾಡಿದ ಜಮೀನು ಉಳಿದರೆ ಮಾತ್ರ ರೈತರಿಗೆ ಬದುಕು. ಭದ್ರಾ ಅಣೆಕಟ್ಟು ನಿರ್ಮಾಣದಿಂದ ಫಲವತ್ತಾದ ಜಮೀನು, ಬದುಕನ್ನು ಕಳೆದುಕೊಂಡ ತಾಲ್ಲೂಕಿನ ಜನರ ಬದುಕು ಉತ್ತಮವಾಗಿ ರೂಪಿತವಾಗಲು 50 ವರ್ಷಗಳೇ ಸಂದುಹೋಗಿವೆ. ಸಾರ್ಯ, ಚೆನ್ನಕೂಡಿಗೆ, ಹೆನ್ನಂಗಿ ಗ್ರಾಮಗಳಲ್ಲಿ ನೆಲೆ ಕಂಡುಕೊಂಡಿರುವ ನಿರಾಶ್ರಿತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ತಾಲ್ಲೂಕಿನ ಹೆಬ್ಬೆ ಅಭಯಾರಣ್ಯದಲ್ಲಿ ವಾಸಗಿದ್ದವರನ್ನು ಸ್ಥಳಾಂತರಿಸಲಾಯಿತು. ಭಾರಿ ಗಾತ್ರದ ಮರಗಳು ಅಭಯಾರಣ್ಯದಿಂದ ಕಾಣೆಯಾದವು. ಅವುಗಳನ್ನು ಲೂಟಿ ಮಾಡಿದ್ದು ಯಾರು ಎಂದು ಅರಣ್ಯ ಇಲಾಖೆ ತಿಳಿಸಲಿ ಎಂದು ಒತ್ತಾಯಿಸಿದರು.
ರೈತ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ದೇವಂತ್ ಮಾತನಾಡಿ, ಕಾಯ್ದೆಗಳು ರೈತರ ಬದುಕನ್ನು ಮೂರಾ ಬಟ್ಟೆ ಮಾಡುತ್ತಿವೆ. ಪಕ್ಷ ಬೇಧ ಮರೆತು ಎಲ್ಲರೂ ಇವುಗಳ ವಿರುದ್ಧ ಹೋರಾಡಬೇಕು ಎಂದರು.
ಸಮಿತಿ ಸದಸ್ಯೆ ಸಿ.ಎಲ್.ಮನೋಹರ್, ಶಾಸಕಾಂಗಕ್ಕಿಂತ ಅರಣ್ಯ ಇಲಾಖೆ ದೊಡ್ಡದಲ್ಲ. ರಾಜಕೀಯ ಪಕ್ಷಗಳು ಮಲೆನಾಡಿನ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ ಎಂದರು.
ರೈತ ಸಮಿತಿಯ ಪುರುಷೋತ್ತಮ್ ಕೂಸಗಲ್, ಸಂದೇಶ್, ಸಚ್ಚಿನ್, ನವೀನ್, ರತ್ನಾಕರ್, ವಿವಿಧ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್, ಆಶೀಶ್ ಕುಮಾರ್, ವೈ.ಎಸ್.ರವಿ. ಶ್ರೀನಾಥ್, ಎನ್.ಡಿ.ಪ್ರಸಾದ್, ಮಂಜುನಾಥ್, ವಾಲ್ಮೀಕಿ ಶ್ರೀನಿವಾಸ್ ಇದ್ದರು.
ಆನೆಗಳ ಹಿಂಡಿನ ಆತಂಕ
ತಾಲ್ಲೂಕಿನ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ತೋಟಕ್ಕೆ ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತಿದ್ದು ತೋಟಕ್ಕೆ ಹೋದವರು ವಾಪಸ್ ಬರುವ ಭರವಸೆ ಇಲ್ಲ. ಭದ್ರಾ ಅಭಯಾರಣ್ಯದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಂಗಗಳು ತೋಟವನ್ನು ಲೂಟಿ ಮಾಡಿದರೂ ಪರಿಹಾರವಿಲ್ಲ. ಮುಸಿಯದ ಲೂಟಿಗೆ ಪರಿಹಾರವಿದೆ. ಇದು ಯಾವ ಕಾನೂನು? ಕೃಷಿ ಮಾಡಿ ಅನ್ನ ಕೊಡುವ ರೈತರಿಗೆ ಜಾಗವಿಲ್ಲವಾಗಿದೆ ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.