ADVERTISEMENT

ಚಿಕ್ಕಮಗಳೂರು: ಮಲೆನಾಡು ಮೋಟಾರ್ ಚಾಲನಾ ಶಾಲೆಗಳ ಸಂಘ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:47 IST
Last Updated 5 ಫೆಬ್ರುವರಿ 2026, 5:47 IST
ಎಚ್‌.ಪಿ. ಸುರೇಶ್
ಎಚ್‌.ಪಿ. ಸುರೇಶ್   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಘ ರಚಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಪಿ. ಸುರೇಶ್ ತಿಳಿಸಿದರು.

‘ಸಂಘದ ವತಿಯಿಂದ ಜ. 30ರಂದು ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅಂದೇ ನಮ್ಮ ಎಲ್ಲಾ ಚಾಲನಾ ತರಬೇತಿ ಶಾಲೆಗಳ ಸಮ್ಮುಖದಲ್ಲಿ ಡಿ.ಟಿ. ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಎಲ್ಲಾ ಶಾಲಾ– ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು. ರಕ್ತದಾನ ಶಿಬಿರ ಏರ್ಪಡಿಸಲಾಗುವುದು. ತರಬೇತಿ ಶಾಲೆಗಳಲ್ಲಿ ಉತ್ತಮವಾದ ಚಾಲನಾ ತರಬೇತಿ ನೀಡಲು ಸೂಕ್ತ ಸಲಹೆ ನೀಡುವುದು ಸಂಘದ ಧ್ಯೇಯ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 42 ಚಾಲನಾ ತರಬೇತಿ ಶಾಲೆಗಳು ಮಾನ್ಯತೆ ಪಡೆದಿವೆ. ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಸುಸಜ್ಜಿತ ಚಾಲನಾ ಪರೀಕ್ಷೆಗೆ ಪಥ ನಿರ್ಮಾಣ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಸಂಘದ ಗೌರವ ಅಧ್ಯಕ್ಷರಾಗಿ ಕೆ.ಆರ್. ಅನಿಲ್‌ಕುಮಾರ್, ಎನ್.ಕೆ. ಸತ್ಯನಾಥ್, ನೂರುಲ್ಲಾ ಖಾನ್, ಬಲರಾಂ ನಾಯಕ್, ಉಪಾಧ್ಯಕ್ಷರಾಗಿ ತೀರ್ಥಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್‌.ಪಿ. ಸುರೇಶ್, ಕಾರ್ಯಾಧ್ಯಕ್ಷ ಸುಧೀರ್, ಸಹ ಕಾರ್ಯದರ್ಶಿ ಇನಾಯತ್, ಖಜಾಂಚಿ ಜಯಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಕೆ.ಆರ್. ಅನಿಲ್‌ಕುಮಾರ್, ಎನ್.ಕೆ. ಸತ್ಯನಾಥ್, ನೂರುಲ್ಲಾ ಖಾನ್, ತೀರ್ಥಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.