ADVERTISEMENT

ಬುಡಕಟ್ಟು ಮಕ್ಕಳಿಗೆ ತಲುಪದ ಆಹಾರ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿನ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 6:00 IST
Last Updated 28 ನವೆಂಬರ್ 2020, 6:00 IST
ನರಸಿಂಹರಾಜಪುರದ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದತ್ತು ಮಾಸಾಚರಣೆಯ ಭಿತ್ತಿಪತ್ರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿನ್ ಬಿಡುಗಡೆಗೊಳಿಸಿದರು. ಆಯೋಗದ ಸದಸ್ಯ ಡಿ.ಶಂಕರಪ್ಪ ಇದ್ದರು.
ನರಸಿಂಹರಾಜಪುರದ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದತ್ತು ಮಾಸಾಚರಣೆಯ ಭಿತ್ತಿಪತ್ರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿನ್ ಬಿಡುಗಡೆಗೊಳಿಸಿದರು. ಆಯೋಗದ ಸದಸ್ಯ ಡಿ.ಶಂಕರಪ್ಪ ಇದ್ದರು.   

ನರಸಿಂಹರಾಜಪುರ: ಗಿರಿಜನ ಆಶ್ರಮ ಮತ್ತು ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿವಿಧ ಬುಡಕಟ್ಟು ಜನಾಂಗದ ಮಕ್ಕಳಿಗೆ ಲಾಕ್‌ಡೌನ್ ಅವಧಿಯಲ್ಲಿ ಆಹಾರ ಸಾಮಗ್ರಿ ಅವರ ಮನೆಗೆ ತಲುಪಿಸದಿರುವುದಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿನ್ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ಬಾಲನ್ಯಾಯ ಕಾಯ್ದೆ 2015 ಹಾಗೂ ಪೋಕ್ಸೊ ಕಾಯ್ದೆ 2012ರ ಅನುಷ್ಠಾನದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 1,385 ಮಕ್ಕಳಲ್ಲಿ ಎಷ್ಟು ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ಸ್ಥಿತಿ ಹೇಗಿದೆ’ ಎಂದು ಆಯೋಗದ ಸದಸ್ಯ ಡಿ.ಶಂಕರಪ್ಪ ಅವರು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪ್ರಶ್ನಿಸಿದರು.

ADVERTISEMENT

ಇದಕ್ಕೆ ಉತ್ತರ ನೀಡಲು ಅಧಿಕಾರಿ ತಡವರಿಸಿದರು. ಮಕ್ಕಳಿಗೆ ಆಹಾರ ಪದಾರ್ಥ ಒದಗಿಸದಿದ್ದರೆ ಈ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. ವಿದ್ಯಾರ್ಥಿ ನಿಲಯದಲ್ಲಿ ಶಾಲಾ ಮಕ್ಕಳಿಗೆ 8 ತಿಂಗಳಿನಿಂದ ಆಹಾರ ಸಾಮಗ್ರಿಗಳು ತಲುಪುತ್ತಿಲ್ಲ ಎಂದು ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಭೆಯ ಗಮನ ಸೆಳೆದರು.

ಜಿಲ್ಲೆಯ 26 ಮಕ್ಕಳ ಪಾಲನಾ ಕೇಂದ್ರಗಳಲ್ಲಿ 94 ಮಕ್ಕಳಿದ್ದಾರೆಂದು ಅಧಿಕಾರಿ ಮಾಹಿತಿ ನೀಡಿದರು.

ಚಿಕ್ಕಮಗಳೂರಿನ ಇಂದಾವರದ ಬಸೇರಾ ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ ಬಿಹಾರದ 30 ಮಕ್ಕಳನ್ನು ಲಾಕ್‌ಡೌನ್ ಮುಗಿದ ಮೇಲೆ ಅವರ ಪೋಷಕರ ಬಳಿ ಕಳುಹಿಸಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಭೆ ಅಧಿಕಾರಿಯನ್ನು ಪ್ರಶ್ನಿಸಿದರು. ‘ಮೇಘಾಲಯದ 40 ಮಕ್ಕಳನ್ನು ಪೋಷಕರ ಬಳಿ ಕಳುಹಿಸಲಾಯಿತು. ಬಿಹಾರದಿಂದ ಮಕ್ಕಳನ್ನು ಕರೆದು ಕೊಂಡು ಹೋಗಲು ಪೋಷಕರು ಮುಂದೆ ಬಂದಿಲ್ಲ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ತಾಲ್ಲೂಕಿನ ಶಿವಪುರದ ಮಹಿಳೆಯೊಬ್ಬರಿಗೆ ಜನಿಸಿದ ಮಗುವನ್ನು ಅಕ್ರಮವಾಗಿ ವೈದ್ಯರೊಬ್ಬರು ಅದಲು, ಬದಲು ಮಾಡಿರುವುದು ಅಥವಾ ಮಾರಾಟ ಮಾಡಿರುವ ಬಗ್ಗೆ ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿಗೆ ದೂರು ದಾಖಲಾಗಿದೆ. ಆದರೆ, ಕೊಪ್ಪದ ಪೊಲೀಸರು ಎಫ್‌ಐಆರ್ ದಾಖಲಿಸದಿರುವುದಕ್ಕೆ ಸಮಿತಿ ಅಧಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿತು.

‘ಜಿಲ್ಲೆಯಿಂದ ಲಾಕ್‌ಡೌನ್ ಮುಗಿದ ಮೇಲೆ 180 ಮಕ್ಕಳು ವಲಸೆ ಹೋಗಿದ್ದಾರೆ. ಇದರಲ್ಲಿ ಅಂತರ ಜಿಲ್ಲೆಗೆ 171, ಅಂತರ ರಾಜ್ಯಕ್ಕೆ 9 ಮಕ್ಕಳು ವಲಸೆ ಹೋಗಿದ್ದಾರೆ. ಪ್ರಸ್ತುತ 71 ಮಕ್ಕಳು ವಲಸೆ ಬಂದಿದ್ದು, 15 ಮಕ್ಕಳು ಜಿಲ್ಲೆಯಲ್ಲಿಯೇ ಶಾಲೆಗೆ ದಾಖಲಾಗಲು ಒಪ್ಪಿದ್ದಾರೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಇಒ ಎಸ್.ನಯನ, ಸಿಡಿಪಿಒ ಧನಂಜಯ ಮೇದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.