ADVERTISEMENT

ಕಡೂರು: ರಾಗಿ ಬೆಳೆ, ಉತ್ತಮ ಇಳುವರಿ ನಿರೀಕ್ಷೆ

ವಾರದಿಂದ ಬಿಸಿಲಿನ ವಾತಾವರಣ– ರೈತರಲ್ಲಿ ಆತಂಕ

ಬಾಲು ಮಚ್ಚೇರಿ
Published 2 ಅಕ್ಟೋಬರ್ 2020, 6:02 IST
Last Updated 2 ಅಕ್ಟೋಬರ್ 2020, 6:02 IST
ಕಡೂರಿನ ತಾಲ್ಲೂಕಿನಲ್ಲಿ ಕಣ್ಮನ ಸೆಳೆಯುವ ರಾಗಿ ಬೆಳೆ
ಕಡೂರಿನ ತಾಲ್ಲೂಕಿನಲ್ಲಿ ಕಣ್ಮನ ಸೆಳೆಯುವ ರಾಗಿ ಬೆಳೆ   

ಕಡೂರು: 10 ದಿನಗಳ ಹಿಂದೆ ಸುರಿದ ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ರೈತರಲ್ಲಿ ರಾಗಿ ಬೆಳೆ ಉತ್ತಮ ಇಳುವರಿಯ ನಿರೀಕ್ಷೆ ಮೂಡಿಸಿದೆ. ಈ ನಡುವೆ ಕಳೆದ ಒಂದು ವಾರದಿಂದ ಬಿಸಿಲಿನ ವಾತಾವರಣವಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ನೀರಾವರಿಗಿಂತ ಮಳೆ ಆಶ್ರಿತ ಭೂಮಿಯೇ ಹೆಚ್ಚಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಪ್ರಮುಖವಾಗಿ ರಾಗಿ ಬೆಳೆಯುತ್ತಾರೆ. ಬಯಲುಸೀಮೆ ಪ್ರದೇಶವಾದ ಕಡೂರು ತಾಲ್ಲೂಕಿನಾದ್ಯಂತ ಈ ಬಾರಿ ಒಟ್ಟು 33,295 ಹೆಕ್ಟೇರ್ ಪ್ರದೇಶಗಳಲ್ಲಿ ರಾಗಿ ಬಿತ್ತನೆಯಾಗಿದೆ. ಕೃಷಿ ಇಲಾಖೆಯ ನಿಗದಿತ ಗುರಿ 31,500 ಹೆಕ್ಟೇರ್‌ಗಿಂತ ಹೆಚ್ಚುವರಿ 1,795 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ.

ರಾಗಿ ಕಾಳುಕಟ್ಟುವ ಹಂತದಲ್ಲಿದ್ದು, ಇನ್ನೂ ಒಂದೂವರೆ ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ತೆನೆ ಕಟ್ಟಲಿದೆ. ತಡವಾಗಿ ಬಿತ್ತನೆ ಮಾಡಿದ ರೈತರ ಹೊಲಗಳಲ್ಲಿ ಬೆಳವಣಿಗೆಯ ಹಂತದಲ್ಲಿ ರುವ ರಾಗಿಗೆ ಈಗ ತೇವಾಂಶದ ಕೊರತೆಯಾಗದಂತೆ ಮಳೆಯ ಅಗತ್ಯವಿದೆ. ಈ ಹಿಂದೆ ಸೆಪ್ಟೆಂಬರ್ 21ರಂದು ಕಡೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1.54 ಸೆಂ.ಮೀ. ಮಳೆಯಾಗಿತ್ತು. ಅದರಂತೆ ಬೀರೂರು (0.9), ಸಖರಾಯಪಟ್ಟಣ(1.9), ಸಿಂಗಟಗೆರೆ (1.3), ಪಂಚನಹಳ್ಳಿ (0.4), ಎಮ್ಮೆದೊಡ್ಡಿ (2.6) ಅಂದು ಮಳೆಯಾಗಿದ್ದೇ ಕೊನೆ.

ADVERTISEMENT

ವಾರದಿಂದ ಮಳೆಯಾಗಿಲ್ಲದಿರು ವುದು ರೈತರಲ್ಲಿ ಒಂದಿಷ್ಟು ಆತಂಕ ಹುಟ್ಟಿಸಿದೆಯಾದರೂ ಕಳೆದ ಬಾರಿ ಹಿಂಗಾರು ಮಳೆ ಸಮೃದ್ಧವಾಗಿ ಬಂದಂತೆ ಈ ಬಾರಿಯೂ ಬರುತ್ತದೆಯೆನ್ನುವ ಆಶಾಭಾವನೆ ರೈತರದ್ದಾಗಿದೆ. ಪ್ರಸ್ತುತ ತಾಲ್ಲೂಕಿನ ಹೊಲಗಳಲ್ಲಿ ರಾಗಿ ಪೈರು ಹಸಿರಿನಿಂದ ಕೂಡಿ ಕಣ್ಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.