ADVERTISEMENT

ಅರಣ್ಯ ಭೂಮಿಯ ಕಗ್ಗಂಟು ಸರಿಪಡಿಸಲು ಯತ್ನಿಸಿ

ಬಾಸೂರು ಗ್ರಾಮದ ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ.ಎಸ್‌.ಆನಂದ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:58 IST
Last Updated 31 ಡಿಸೆಂಬರ್ 2025, 6:58 IST
ಕಡೂರು ತಾಲ್ಲೂಕು ಬಾಸೂರಿನಲ್ಲಿ ಮಂಗಳವಾರ ನಡೆದ ಶಾಸಕರ ನಡೆ ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್‌.ಆನಂದ್‌, ತಹಶೀಲ್ದಾರ್‌ ಪೂರ್ಣಿಮಾ ಗ್ರಾಮಸ್ಥರೊಂದಿಗೆ ಚರ್ಚಿಸಿದರು
ಕಡೂರು ತಾಲ್ಲೂಕು ಬಾಸೂರಿನಲ್ಲಿ ಮಂಗಳವಾರ ನಡೆದ ಶಾಸಕರ ನಡೆ ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್‌.ಆನಂದ್‌, ತಹಶೀಲ್ದಾರ್‌ ಪೂರ್ಣಿಮಾ ಗ್ರಾಮಸ್ಥರೊಂದಿಗೆ ಚರ್ಚಿಸಿದರು   

ಕಡೂರು: ಜನವಸತಿ ಪ್ರದೇಶಗಳನ್ನೂ ಅರಣ್ಯ ಭೂಮಿ ಎಂದು ಪರಿಗಣಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಶಾಸಕ ಕೆ.ಎಸ್‌.ಆನಂದ್‌ ಸೂಚಿಸಿದರು.

ತಾಲ್ಲೂಕಿನ ಬಾಸೂರು ಗ್ರಾಮದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಬಾಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡನಕಟ್ಟೆ ಹಳ್ಳಿಯ ಸ.ನಂ.42ರಲ್ಲಿ 1.18 ಎಕರೆ ಕಂದಾಯ ಭೂಮಿಯಲ್ಲಿ ಮನೆಗಳು, ಬಾವಿ ಹಾಗೂ ಜನವಸತಿಯೂ ಇದೆ. ಈ ಭೂಮಿಯನ್ನು ಅರಣ್ಯ ಭೂಮಿ ಎಂದು ಗುರುತಿಸಲಾಗಿದೆ. ಇದರಿಂದ ನಮಗೆ ಇ-ಸ್ವತ್ತು , ಹಕ್ಕುಪತ್ರ ಸಿಗುತ್ತಿಲ್ಲ. ಈ ಭೂಮಿಯನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ 1988-89ರಲ್ಲಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಸ.ನಂ.28ರಲ್ಲಿ ಅದೇ ಅವಧಿಯಲ್ಲಿ 90 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅರಣ್ಯ ಇಲಾಖೆಯವರು ಈಗ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥ ನಿಜಗುಣಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಅಳಲು ತೋಡಿಕೊಂಡರು. 

ADVERTISEMENT

ಇದಕ್ಕೆ ಸಮಜಾಯಿಷಿ ನೀಡಿದ ತಾಲ್ಲೂಕು ಅರಣ್ಯ ಅಧಿಕಾರಿ ಹರೀಶ್‌, ಅರಣ್ಯ ಭೂಮಿಯನ್ನು ವಾಪಸ್‌ ನೀಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂದರು.  ಬಳಿಕ ಪ್ರತಿಕ್ರಿಯಿಸಿದ ಶಾಸಕ ಆನಂದ್‌, ತಹಶೀಲ್ದಾರ್‌ ಮತ್ತು ಅರಣ್ಯಾಧಿಕಾರಿ ಕುಳಿತು ಮಾತನಾಡಿ ಬೇರೆ ಜಾಗ ಗುರುತಿಸಿ. ಈ ಹಿಂದೆ ಜಿಲ್ಲಾಧಿಕಾರಿ ನೀಡಿರುವ ಆದೇಶ ಏನು ಎನ್ನುವ ದಾಖಲೆ ತೆಗೆಸಿ. ಜಿಲ್ಲಾಧಿಕಾರಿ ಬಳಿ ನಾನು ಮಾತನಾಡುವೆ. ಆದರೆ ಅರಣ್ಯ ಭೂಮಿಯ ಪರಿವರ್ತನೆ ಅಷ್ಟು ಸುಲಭವಿಲ್ಲ ಎನ್ನುವುದು ಜನರ ಗಮನದಲ್ಲಿರಲಿ ಎಂದರು.

ಹಲವರು ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಶಾಲೆಗೆ ಕಾಂಪೌಂಡ್‌, ಪಂಚಾಯಿತಿಗೆ ಹೊಸಕಟ್ಟಡ, ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಕಚೇರಿ, 2ನೇ ಅಂಗನವಾಡಿಗೆ ಕಟ್ಟಡ ಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರತಿಕ್ರಿಯಿಸಿದ ಶಾಸಕ ಆನಂದ್‌, ಬಾಸೂರು ಪಂಚಾಯಿತಿ ಸ್ವಂತ ಕಟ್ಟಡ ಹೊಂದಲು ನಿರ್ಲಕ್ಷ್ಯ ಹೊಂದಿರುವ ಜತೆಗೆ ಕ್ರಿಯಾ ಯೋಜನೆ ರೂಪಿಸುವಲ್ಲಿಯೇ ಅತ್ಯಂತ ಹಿಂದುಳಿದಿದೆ. ಇಲ್ಲಿ ಬಹಳಷ್ಟು ಕೆಲಸಗಳನ್ನು ನರೇಗಾದಡಿ ನಿರ್ವಹಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಹೊಸದಾಗಿ ಬಂದಿರುವ ಪಿಡಿಒ ಮತ್ತು ತಾಲ್ಲೂಕು ಪಂಚಾಯಿತಿ ಇಒ ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಗ್ರಾಮಸ್ಥರ ಕೋರಿಕೆಗಳಿಗೂ ಹೊಸ ಕ್ರಿಯಾ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.

ಗೌಡನಕಟ್ಟೆ ಹಳ್ಳಿಯಲ್ಲಿ 1ರಿಂದ 7ನೇ ತರಗತಿವರೆಗೆ ಶಾಲೆ ನಡೆಯುತ್ತಿದೆ. ಮೂವರು ಶಿಕ್ಷಕರು ಇದ್ದಾರೆ. 18 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಒಬ್ಬ ಶಿಕ್ಷಕಿ ತಿಂಗಳಾನುಗಟ್ಟಲೆ ರಜೆ ಹಾಕಿ ಹೋಗುತ್ತಾರೆ, ಮಕ್ಕಳ ಭವಿಷ್ಯ ಹಾಳಾಗುವ, ಶಾಲೆ ಮುಚ್ಚುವ ಭಯವಿದ್ದು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಕೋರಿದರು. ಉತ್ತರ ನೀಡಿದ ಬಿಇಒ ಎಂ.ಎಚ್‌.ತಿಮ್ಮಯ್ಯ, ಶಿಕ್ಷಕರು ಹಕ್ಕಿನ ರಜೆಯ ಮೇಲೆ ತೆರಳುತ್ತಿದ್ದಾರೆ. ಅವರು 6 ತಿಂಗಳು ರಜೆ ಕೋರಿದ್ದನ್ನು ಮನ ಒಲಿಸಿ 15 ದಿನ ಮಂಜೂರು ಮಾಡಿದ್ದೇನೆ ಎಂದರು. ಅವರು ರಜೆಯ ಮೇಲೆ ತೆರಳಿದರೆ ಬೇರೆಯವರನ್ನು ನಿಯೋಜಿಸಿ ಪಾಠ-ಪ್ರವಚನ ನಿರ್ವಹಿಸಿ, ಇದು ನಿಮ್ಮ ಹೊಣೆ ಎಂದು ಶಾಸಕರು ಬಿಇಒಗೆ ಸೂಚಿಸಿದರು.

ನಮ್ಮ ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆ ಸರಿಯಾಗಿ ಆಗಿಲ್ಲ. ಎಲ್ಲೋ ಕುಳಿತು ವರದಿ ನೀಡುವ ಅಧಿಕಾರಿಗಳ ತಪ್ಪಿನಿಂದ ನಾವು ರಾಗಿ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ದೂರಿದರು. ಕೃಷಿ ಸಹಾಯಕ ನಿರ್ದೇಶಕ ಅಶೋಕ್‌ ಉತ್ತರಿಸಿ, ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ವತಿಯಿಂದ ಪಿಆರ್‌ಗಳನ್ನು ನೇಮಿಸಿ ಸಮೀಕ್ಷೆ ನಡೆಸಲಾಗುತ್ತದೆ. ವಲಯವಾರು ಅಧಿಕಾರಿಗಳಿಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆಪ್‌ ಮೂಲಕ ಆಕ್ಷೇಪಣೆ ಸಲ್ಲಿಸಲೂ ಅವಕಾಶ ನೀಡಲಾಗಿತ್ತು. ಇಲ್ಲಿ ಗ್ರಾಮ ಆಡಳಿತ ಅಧಿಕಾರಿ ವರದಿ ಸಲ್ಲಿಸಿದ್ದಾರೆ ಎಂದರು. ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದ ಗ್ರಾಮ ಆಡಳಿತ ಅಧಿಕಾರಿ ಸಿದ್ದಪ್ಪ ಗೈರಾಗಿದ್ದಕ್ಕೆ ಗರಂ ಆದ ಶಾಸಕ, ನಾವು ಇಲ್ಲಿ ಸುಮ್ಮನೆ ಸಭೆ ನಡೆಸಲು ಬಂದಿಲ್ಲ, ಅಧಿಕಾರಿಗಳು ಸಭೆಗೆ ಸೂಕ್ತ ಮಾಹಿತಿ ನೀಡಲು ತಯಾರಾಗಿ ಬರಬೇಕು. ತಹಶೀಲ್ದಾರರು ವಿಎಗಳನ್ನು ಸಮರ್ಥಿಸಿಕೊಳ್ಳುವ ಬದಲು ಅವರ ಅಮಾನತ್ತಿಗೆ ಬರೆಯಿರಿ ಎಂದು ಸಿಡಿಮಿಡಿಗೊಂಡರು.

ಅಮೃತಮಹಲ್‌ ಕಾವಲಿನಲ್ಲಿ 1951ರಿಂದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಅಲ್ಲಿ ಕನಿಷ್ಠ 2 ಎಕರೆ ಸಾಗುವಳಿ ಮಾಡಲು ಅವಕಾಶವಿತ್ತು. ಕೆಲ ವರ್ಷಗಳಿಂದ ನಮ್ಮನ್ನು ಅತಿಕ್ರಮಣಕಾರರು ಎಂಬಂತೆ ಪರಿಗಣಿಸಿ ಹೊರಹಾಕಲಾಗಿದೆ. ಮತ್ತೆ ನಮಗೆ ಸಾಗುವಳಿ ಮಾಡಲು ಅವಕಾಶ ಕೊಡಿ ಎಂದು ಶಿವು ಮತ್ತಿತರರು ಕೋರಿದರು. ಕಾವಲಿನ ಸಹಾಯಕ ನಿರ್ದೇಶಕ ಡಾ.ಕೆ.ಟಿ.ನವೀನ್‌, ಈ ವಿಷಯವಾಗಿ ಇದು ಕೃಷ್ಣಮೃಗ ಸಂರಕ್ಷಿತ ಪ್ರದೇಶ ಎಂದು ಗುರುತಿಸಿದೆ. ಸಾಗುವಳಿ ವಿಚಾರವಾಗಿ ಚಿಕ್ಕಮಗಳೂರಿನ ವೈಲ್ಡ್‌ಲೈಫ್‌ ಸಂಸ್ಥೆಯವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಉತ್ತರ ನೀಡಿದರು. ಪರಿಹಾರ ಕೋರಿದ್ದವರು ಹೈಕೋರ್ಟ್‌ನಲ್ಲಿ ಎರಡು ವರ್ಷವಾದರೂ ಯಾವುದೇ ಸುಳಿವಿಲ್ಲ. ನೀವು ಯಾಕೆ ಅಡ್ಡಿಪಡಿಸುತ್ತೀರಿ? ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಆನಂದ್‌, ಈ ಹಿಂದೆ ಇಲ್ಲಿ ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿಗೆ ಸೂಚಿಸಿದ್ದಕ್ಕೆ ಹಿಂದಿನ ಶಾಸಕರಿಗೇ ನ್ಯಾಯಾಲಯ ನೋಟಿಸ್‌ ನೀಡಿತ್ತು. ಕುಳಿತು ಮಾತನಾಡಿ ಬಗೆಹರಿಸಬೇಕಾದ ಪ್ರಕರಣವಿದು ಎಂದು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸಿ.ಆರ್‌.ಪ್ರವೀಣ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾ ನಾಗರಾಜ್‌, ಉಪಾಧ್ಯಕ್ಚೆ ಕವಿತಾ, ಸದಸ್ಯರಾದ ಕವಿತಾ ಆರ್‌, ಗೌರಮ್ಮ, ಬಿ.ಪಿ.ನಾಗಭೂಷಣ್‌, ಶ್ರೀಕಾಂತ್‌, ಸಿ.ಕೆ.ಪರಮೇಶ್ವರಪ್ಪ, ನರಸಮ್ಮ, ನೀಲಮ್ಮ, ರಾಜಪ್ಪ, ಎಸ್‌.ಎನ್‌.ತಮ್ಮಯ್ಯಪ್ಪ, ಮರುಳಪ್ಪ, ಪಿಡಿಒ ನೇತ್ರಾವತಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಬಾಸೂರು, ಚಿಕ್ಕಬಾಸೂರು, ಗೌಡನಕಟ್ಟೆಹಳ್ಳಿ, ವಿ.ಸಿದ್ದರಹಳ್ಳಿ, ಲಕ್ಕಡಿಕೋಟೆ, ಬೋರನಹಳ್ಳಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.