ADVERTISEMENT

ಮಾನಸಿಕ ಒತ್ತಡಕ್ಕೆ ಒಳಗಾಗಿ ಇಲ್ಲಸಲ್ಲದ ಹೇಳಿಕೆ: ಟಿ.ಡಿ.ರಾಜೇಗೌಡ ಆರೋಪ

ಜೀವರಾಜ್‌ ವಿರುದ್ಧ ಟಿ.ಡಿ.ರಾಜೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 6:48 IST
Last Updated 6 ಡಿಸೆಂಬರ್ 2020, 6:48 IST
ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ   

ನರಸಿಂಹರಾಜಪುರ: ‘ಮಾಜಿ ಶಾಸಕ ಡಿ.ಎನ್‌. ಜೀವರಾಜ್ ಅವರು ಚುನಾವಣೆಯಲ್ಲಿ ಸೋಲಿನ ಮನಸ್ಥಿತಿಯಿಂದ ಹೊರಗೆ ಬರದೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೀವರಾಜ್ ಶಾಸಕ ರಾಗಿದ್ದಾಗ ಕಡವಂತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭದ್ರಾ ಹುಲಿ ಯೋಜನೆ ಮತ್ತು ಭೂ ಕಬಳಿಕೆ
ನಿಷೇಧ ಕಾಯ್ದೆ 192(ಎ)ಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಒತ್ತಡಕ್ಕೆ ಒಳಗಾಗಿ ಸಹಿ ಹಾಕಿದ್ದರು ಎಂದು ಹೇಳಿಕೆ ನೀಡಿದ್ದರು. ನನ್ನಿಂದ ತಪ್ಪಾಗಿದೆ ಕಾಂಗ್ರೆಸ್ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ್ದರು’ ಎಂದು ದೂರಿದರು.

‘2011ರಲ್ಲಿ ತಾಲ್ಲೂಕು ಕೇಂದ್ರ ದಲ್ಲಿ ಸಾರ್ವಜನಿಕ ಸಭೆ ನಡೆಸಿ ಅರಣ್ಯಾಧಿಕಾರಿಗಳ ಮೂಲಕ ಹುಲಿ ಯೋಜನೆನ್ನು ರದ್ದುಪಡಿಸಲಾಗಿದೆ ಎಂಬ ಹೇಳಿಕೆ ಕೊಡಿಸಿದ್ದರು. ಅಲ್ಲದೆ, ಅಂದು ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರ ಮೂಲಕವೂ ಹುಲಿಯೋಜನೆಗೆ ಎಳ್ಳು ನೀರು ಬಿಡಲಾಗಿದೆ ಎಂದು ಹೇಳಿಕೆ ಕೊಡಿಸಿದ್ದರು. ಅಂದೇ ಜನರಿಗೆ ಸತ್ಯ ತಿಳಿಸಿದ್ದರೆ ಮಲೆನಾಡಿನ ರೈತರ ಬದುಕು ದುಸ್ತರವಾಗುವುದು ತಪ್ಪುತ್ತಿತ್ತು. ಸುಳ್ಳು ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಕೈಬಿಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಾನು ರಾಜಕೀಯ ಪ್ರವೇಶ ಮಾಡುವ ಮೊದಲು ಎಷ್ಟು ಆಸ್ತಿ ಹೊಂದಿದ್ದೆ. ಆನಂತರ ಎಷ್ಟು ಆಸ್ತಿ ಇದೆ ಎಂಬ ಬಗ್ಗೆ ವಿವರವಾಗಿ ಸಂಬಂಧಪಟ್ಟ ವರಿಗೆ ದಾಖಲೆ ಸಲ್ಲಿಸಿದ್ದೇನೆ. ಜೀವರಾಜ್ ಅವರು ತಾವು ಶಾಸಕರಾಗಿ ಆಯ್ಕೆಯಾಗುವ ಮೊದಲು ಆಸ್ತಿ ಎಷ್ಟಿತ್ತು. ಮೂರು ಬಾರಿ ಶಾಸಕರಾದ ಮೇಲೆ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು. ನಾನು ಸಹ ಬಿಡುಗಡೆ ಮಾಡುತ್ತೇನೆ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಮುಖಂಡರಾದ ಗೇರುಬೈಲು ನಟರಾಜ್, ಪಿ.ಆರ್.ಸದಾಶಿವ, ಬೆನ್ನಿ, ಕೆ.ಎಂ.ಸುಂದರೇಶ್, ಅಬೂಬಕ್ಕರ್, ಪ್ರಶಾಂತ್ ಶೆಟ್ಟಿ, ಈ.ಸಿ.ಜೋಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.