ADVERTISEMENT

ಮೋದಿ ಅವರದ್ದು ಸಂತೆ ಭಾಷಣ: ಎಚ್‌ಡಿಕೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 16:13 IST
Last Updated 6 ಮಾರ್ಚ್ 2019, 16:13 IST
   

ಚಿಕ್ಕಮಗಳೂರು: ‘ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ರೈತರಿಗೆ ಏನು ಮಾಡಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕೂವರೆ ವರ್ಷದಲ್ಲಿ ದೇಶದಲ್ಲಿ ಏನು ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ಮಾಡಲು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಶೃಂಗೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮುಖ್ಯಮಂತ್ರಿಯಾಗಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಯಾವ ವೇದಿಕೆಯಲ್ಲಿ ಬೇಕಾದರೂ ಚರ್ಚಿಸಲು ತಯಾರಿದ್ದೇನೆ. ಮೋದಿ ಅವರದು ಸಂತೆ ಭಾಷಣ. ಆ ಭಾಷಣಗಳಿಗೆ ನಾನೇಕೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

‘ಮೋದಿ ಅವರು ರಿಮೋಟ್‌ ಎಂದು ಹೇಳಿರುವುದರಲ್ಲಿ ತಪ್ಪೇನಿಲ್ಲ. ನನ್ನನ್ನು ರಿಮೋಟ್‌ ಯಾಕೆ ಮಾಡಿಕೊಂಡಿದ್ದಾರೆ ಎಂದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಸಿದ್ಧಪಡಿಸಿಟ್ಟಿರುವುದನ್ನು ಸ್ನೇಹಿತರು ರಿಪೋರ್ಟ್‌ ಮಾಡುತ್ತಾರೆ’ ಎಂದು ಉತ್ತರಿಸಿದರು.

ADVERTISEMENT

‘ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎಂದು ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ. ನಾನು ರೈತರ ಸಾಲಮನ್ನಾ ಮಾಡಿದ್ದು ಪಾಪದ ಕೆಲಸ ಅವರ ಲೆಕ್ಕದಲ್ಲಿ. ನಾನು ರೈತ ವಿರೋಧಿ, ಮೋದಿ ರೈತ ಪರ ಅಲ್ಲವೆ? ಜನ ತೀರ್ಮಾನಿಸುತ್ತಾರೆ ಬಿಡಿ’ ಎಂದು ‍ಪ್ರತಿಕ್ರಿಯಿಸಿದರು.

‘ಯಾರನ್ನೊ ಗುತ್ತಿಗೆ ಪಡೆದಿದ್ದೇವೆ ಎಂದು ನಾವು ದೇವೇಗೌಡರ ಕುಟುಂಬದವರು ಹೇಳಿಲ್ಲ. ಚುನಾವಣೆಯಲ್ಲಿ ಸೋತಿರಲಿ, ಗೆದ್ದಿರಲಿ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಿ, ಪ್ರೀತಿವಿಶ್ವಾಸ ಗಳಿಸಿ ಇಲ್ಲಿವರೆಗೆ ಬಂದಿದ್ದೇವೆ. ಯಾರ್ಯಾರೋ ಅಸೂಯೆಗೆ, ಹುಡುಗಾಟಿಕೆಗೆ ಏನೆನೋ ಹೇಳಿದರೆ ಅದಕ್ಕೆ ನಾನ್ಯಾಕೆ ಪ್ರತಿಕ್ರಿಯಿಸಬೇಕು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.