
ಮೂಡಿಗೆರೆ: ‘ಅಗ್ನಿವೀರ್ ಯೋಜನೆಯ ಮೂಲಕ ಭಾರತೀಯ ಸೇನೆಗೆ ಸೇರಲು ಯುವಕರಿಗೆ ಉತ್ತಮ ಅವಕಾಶಗಳಿವೆ’ ಎಂದು ಭಾರತೀಯ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್ ರಾಘವೇಂದ್ರರಾವ್ ಹೇಳಿದರು.
ಪಟ್ಟಣದ ಜೇಸಿಐ ಭವನದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್, ಜೇಸಿಐ ಹಾಗೂ ಭಾರತೀಯ ನೌಕಾದಳದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಗ್ನಿವೀರ್ ಯೋಜನೆಯ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಅಗ್ನಿವೀರ್ ಮೂಲಕ ಸೇನೆಗೆ ಸೇರ್ಪಡೆಯಾಗಲು ಎಲ್ಲರಿಗೂ ಉತ್ತಮ ಅವಕಾಶವಿದ್ದು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವ್ಯಾಸಂಗ ಮಾಡಿದವರಿಗೂ ಇಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಸರಳ ವಿಧಾನಗಳ ಮೂಲಕ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಂತರದ ಹಂತಗಳಲ್ಲಿ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ನೇರವಾಗಿ ಸೇನೆಗೆ ಆಯ್ಕೆಯಾಗಬಹುದು. ನೇಮಕಾತಿಯು ಪಾರದರ್ಶಕವಾಗಿ ನಡೆಯುವುದರಿಂದ ಎಲ್ಲರಿಗೂ ಮುಕ್ತ ಅವಕಾಶಗಳು ಲಭ್ಯವಾಗುತ್ತವೆ’ ಎಂದರು.
‘ಅಗ್ನಿವೀರ್ ಮೂಲಕ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿ ಉತ್ತಮ ನಿರ್ವಹಣೆ ತೋರಿದ ಶೇ 25ರಷ್ಟು ಮಂದಿಯನ್ನು ಸೇನೆಯ ಮುಂದಿನ ಹಂತಕ್ಕೆ ಮುಂದವರಿಸುತ್ತಾರೆ. ನಾಲ್ಕು ವರ್ಷ ಸೇವೆ ಸಲ್ಲಿಸಿ ವಾಪಸ್ಸಾದವರಿಗೆ ವಿವಿಧ ಕಂಪನಿಗಳಲ್ಲಿ ಆದ್ಯತೆಯ ಮೇರೆಗೆ ಕೆಲಸ ಸಿಗಲಿದೆ. ಆದ್ದರಿಂದ 17 ರಿಂದ 21 ವರ್ಷದೊಳಗಿನ ಯುವಕರು ಅಗ್ನಿವೀರ್ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು’ ಎಂದರು.
ಸೀನಿಯರ್ ಛೇಂಬರ್ ಅಧ್ಯಕ್ಷ ಎನ್.ಎಲ್.ಪುಣ್ಯಮೂರ್ತಿ ಮಾತನಾಡಿ, ‘ಮಾಹಿತಿ ತಂತ್ರಜ್ಞಾನವು ಇಂದು ವಿಶಾಲವಾಗಿ ಹರಡಿರುವುದರಿಂದ ಇಡೀ ವಿಶ್ವವೇ ಬೆರಳ ತುದಿಯಲ್ಲಿದೆ. ಯುವಕರು ತಂತ್ರಜ್ಞಾನ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಸೇನೆಗೆ ಸೇರಲು ಅವಕಾಶಗಳು ಬಾಗಿಲ ಬಳಿಗೆ ಬಂದಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ಸೀನಿಯರ್ ಛೇಂಬರ್ ಕಾರ್ಯದರ್ಶಿ ಎಚ್.ಆರ್.ಪ್ರದೀಪ್ ದುಂಡುಗ, ಉಪಾಧ್ಯಕ್ಷ ಬಿ. ಬಸವರಾಜು, ಸದಸ್ಯರಾದ ಕೆ.ಎಲ್.ಎಸ್.ತೇಜಸ್ವಿ, ಅತುಲ್ ರಾವ್, ಹಾಲೂರು ರವಿ, ಎಂ.ಡಿ.ವಿಜಯಕುಮಾರ್, ಚಂದ್ರಶೇಖರ್ ಕುನ್ನಹಳ್ಳಿ, ಬಿ.ಎನ್.ಮನಮೋಹನ್, ವಿನೋದ್ ಕುಮಾರ್ ಶೆಟ್ಟಿ, ಪ್ರಸನ್ನ ಗೌಡಹಳ್ಳಿ, ಜೇಸಿಐ ಅಧ್ಯಕ್ಷೆ ಸವಿತಾ ರವಿ, ಸುಪ್ರೀತ್ ಕಾರಬೈಲ್, ಕಸಾಪ ಅಧ್ಯಕ್ಷ ಎಚ್.ಎಂ.ಶಾಂತಕುಮಾರ್, ನಿವೃತ್ತ ಯೋಧರಾದ ಉಮೇಶ್, ರಾಜಶೇಖರ್ ಇದ್ದರು.
ಯುವಕರು ತಂತ್ರಜ್ಞಾನ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ನೇಮಕಾತಿಯು ಪಾರದರ್ಶಕವಾಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶ ಲಭ್ಯ ಸರಳ ವಿಧಾನಗಳ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.