ADVERTISEMENT

ಕಾಫಿ ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕೊಡಿಸಲು ಪ್ರಯತ್ನಿಸುವೆ: ಶೋಭಾ

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:33 IST
Last Updated 24 ಮೇ 2019, 15:33 IST

ಚಿಕ್ಕಮಗಳೂರು: ಕಾಫಿ ಮಂಡಳಿಯನ್ನು ಉಳಿಸಿಕೊಂಡು ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕೊಡಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಫಿ, ಚಹಾ ಇತರ ಮಂಡಳಿಗಳಿಗೂ ಒಂದೇ ರೀತಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಎಲ್ಲ ಮಂಡಳಿಗಳನ್ನು ಒಟ್ಟುಗೊಡಿಸುವ ಪ್ರಸ್ತಾಪವೂ ಹಿಂದೆ ಇತ್ತು. ಕಾಫಿ ಮಂಡಳಿ ಉಳಿಸಿಕೊಂಡು, ಹೆಚ್ಚಿನ ಅಧಿಕಾರ ಕೊಡಿಸಲು ಗಮನ ಹರಿಸುತ್ತೇನೆ’ ಎಂದು ಉತ್ತರಿಸಿದರು.

‘ಚಿಕ್ಕಮಗಳೂರಿಗೆ ಎಕ್ಸ್‌ಪ್ರೆಸ್‌ ರೈಲು ಸಂಚಾರ, ವೇಳಾಪಟ್ಟಿ ಬದಲಾವಣೆ, ಮೆಜೆಸ್ಟಿಕ್‌ವರೆಗೂ ಸಂಚರಿಸುವಂತೆ ವ್ಯವಸ್ಥೆ ಮಾಡಲು ಗಮನ ಹರಿಸುತ್ತೇನೆ. ಕಾಫಿ ಬೆಳೆಗಾರರ ಸಬ್ಸಿಡಿ ಕೊನೆ ಕಂತು ಬಾಕಿ ಇತ್ತು. ಅದನ್ನು ಬಿಡುಗಡೆ ಮಾಡಿಸಲು ಪ್ರಯತ್ನ ಮಾಡುತ್ತೇನೆ’ ಎಂದರು.

ADVERTISEMENT

‘ಅಡಿಕೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಅದನ್ನು ಫಾಲೋ ಅಪ್‌ ಮಾಡುವ ಕೆಲಸ ಮಾಡುತ್ತೇನೆ. ಅಡಿಕೆ ಆಮದು ಕಡಿಮೆಗೊಳಿಸಲು ಪ್ರಯತ್ನಿಸುತ್ತೇನೆ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಸೋಲಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿರುವುದು ಗಿಮಿಕ್. ನೆನ್ನೆ ಆಯ್ಕೆಯಾಗಿ ಇಂದು ರಾಜೀನಾಮೆ ಕೊಡುತ್ತಾರೆಂದು ಅನಿಸುವುದಿಲ್ಲ. ಪ್ರಚಾರ ಮಾಡಿ ಯಾರೂ ರಾಜೀನಾಮೆ ನೀಡಲ್ಲ. ಕುಟುಂಬ ಮತ್ತು ಸಮ್ಮಿಶ್ರ ಸರ್ಕಾರದೊಳಗೆ ಏನು ನಡೆಯುತ್ತಿದೆಯೋ ಗೊತ್ತಿಲ್ಲ. ಮತ್ತೊಮ್ಮೆ ಚುನಾವಣೆ ನಡೆದರೆ ಹಾಸನದ ಜನರಿಗೆ ಹೊರೆಯಾಗುತ್ತದೆ. ಜೆಡಿಎಸ್ ಅದರ ಹೊಣೆ ಹೊರಬೇಕು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.