ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮೂಡಪ್ಪ ಸೇವೆ ಭಾನುವಾರ ಸಂಪನ್ನಗೊಂಡಿತು.
ಗಣಪತಿ ದೇವರ ವಿಗ್ರಹವನ್ನು ಕಬ್ಬಿನ ಬೇಲಿ ನಿರ್ಮಿಸಿ, ಇಲ್ಲಿನ ಪ್ರಧಾನ ಪ್ರಸಾದವಾಗಿರುವ ಅಪ್ಪ ಕಜ್ಜಾಯದಲ್ಲಿ ಮುಖದವರೆಗಿನ ಭಾಗವನ್ನು ಮುಚ್ಚಿ ಒಂದಿಡೀ ರಾತ್ರಿ ಗರ್ಭಗುಡಿಯ ಕದಮುಚ್ಚಿ(ಕವಾಟ ಬಂಧನ), ಮರುದಿನ ಬೆಳೆಗ್ಗೆ ನಡೆ ತೆರೆದು, ಆ ಪ್ರಸಾದವನ್ನು ಆಸ್ತಿಕರಿಗೆ ವಿತರಣೆ ಮಾಡಲಾಯಿತು. ಈ ಬಾರಿ 50 ಸಾವಿರ ಅಪ್ಪಕಜ್ಜಾಯ ಮೂಡಪ್ಪ ಸೇವೆಗೆ ಬಳಕೆಯಾಗಿದೆ.
ಶನಿವಾರ ತಡರಾತ್ರಿ ವಿವಿಧ ವೈದಿಕ ಕ್ರಮಗಳೊಂದಿಗೆ ದೇವರನ್ನು ಅಪ್ಪಕಜ್ಜಾಯದಲ್ಲಿ ಮುಚ್ಚುವ ಪ್ರಕ್ರಿಯೆ ಆರಂಭಗೊಂಡಿತ್ತು. ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ನೇತೃತ್ವ ವಹಿಸಿದ್ದರು. ಕಾರ್ಯಕ್ರಮ ಅಂಗವಾಗಿ ದೀಪ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, ಮಹಾಗಣತಿ ಯಾಗ, ಕಲಾಶಾಭಿಷೇಕ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ದೇವರ ಸವಾರಿ ನಡೆದುವು. ಭಾನುವಾರ ಕವಾಟೋದ್ಘಾಟನೆ, ಅಪೂಪಪ ವರ್ತತ ಮಧ್ಯದಿಂದ ಗಣಪತಿ ದೇವರ ದರ್ಶನ, ವಿಶೇಷಾಭಿಷೇಕ, ಪ್ರಸನ್ನಪೂಜೆ, ಅಪೂಪ ಪ್ರಸಾದ ವಿತರಣೆ, ದೇವರಕೆರೆಯಲ್ಲಿ ಅವಭೃತ ಸ್ನಾನ ನಡೆದುವು.
ಹರಿದು ಬಂದ ಭಕ್ತರ ದಂಡು: ಮೂಡಪ್ಪಸೇವೆಯ ವೀಕ್ಷಣೆಗೆ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು ಮಧೂರಿಗೆ ಭೇಟಿ ನೀಡಿದರು. ಎಲ್ಲರಿಗೂ ಅಪ್ಪಕಜ್ಜಾಯ ಪ್ರಸಾದ ವಿತರಣೆ ನಡೆಯಿತು. ಭಕ್ತರ ಸರತಿ ಸಾಲು ಉಳಿಯತ್ತಡ್ಕವರೆಗೆ ಇತ್ತು. ಕಾರ್ಯಕರ್ತರು ದಟ್ಟಣೆ ನಿಯಂತ್ರಿಸಿದರು.
ಶನಿವಾರ ಬೆಳಗಿನ ಜಾವ ಸುರಿದ ಬಿರುಸಿನ ಗಾಳಿಮಳೆಯಿಂದ ಮಧೂರಿನ ಉತ್ಸವದ ಚಟುವಟಿಕೆಗಳಿಗೆ ಸ್ವಲ್ಪಮಟ್ಟಿಗಿನ ಅಡ್ಡಿಯಾಯಿತು. ದೇವಾಲಯದ ಆವರಣ ಮತ್ತು ಆಸುಪಾಸಿನ ಪ್ರದೇಶಗಳು ನೀರಿನಿಂದ ಆವೃತವಾಗಿ ತೊಂದರೆ ಉಂಟಾಯಿತು. 2ನೇ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದ ನೂತನ ಕಲ್ಯಾಣ ಮಂಟಪದ ಸಭಾಂಗಣಕ್ಕೆ ವರ್ಗಾಯಿಸಲಾಗಿತ್ತು. ತೆಂಕುಬಯಲಿನ ಪಾರ್ತಿಸುಬ್ಬ ವೇದಿಕೆಯ ಆವರಣ ಜಲಾವೃತವಾಗಿದ್ದು, ಬಹುತೇಕ ಕಾರ್ಯಕ್ರಮಗಳನ್ನು ಕೈಬಿಡಲಾಯಿತು. ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.