ADVERTISEMENT

ಜೀವವಿಮಾ ಪ್ರತಿನಿಧಿಗಳ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 4:57 IST
Last Updated 1 ಅಕ್ಟೋಬರ್ 2022, 4:57 IST
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೂಡಿಗೆರೆ ಎಲ್‌ಐಸಿ ಕಚೇರಿ ಎದುರು ವಿಮಾ ಪ್ರತಿನಿಧಿಗಳ ಸಂಘದ ವತಿಯಿಂದ ಅಧ್ಯಕ್ಷ ಎಚ್.ಎಸ್.ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೂಡಿಗೆರೆ ಎಲ್‌ಐಸಿ ಕಚೇರಿ ಎದುರು ವಿಮಾ ಪ್ರತಿನಿಧಿಗಳ ಸಂಘದ ವತಿಯಿಂದ ಅಧ್ಯಕ್ಷ ಎಚ್.ಎಸ್.ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಮೂಡಿಗೆರೆ: ಭಾರತೀಯ ಜೀವ ವಿಮಾ ಪಾಲಿಸಿದಾರರಿಗೆ ಪ್ರಸ್ತುತ ನೀಡುತ್ತಿರುವ ಬೋನಸ್ ದರವನ್ನು ಹೆಚ್ಚಿಸಬೇಕು. ಎಲ್‍ಐಸಿ ಪ್ರೀಮಿಯಂ ಮೇಲಿನ ಜಿಎಸ್‌ಟಿ ತೆಗೆದು ಹಾಕಬೇಕು ಎಂದು ಮೂಡಿಗೆರೆ ತಾಲ್ಲೂಕು ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್ ಆಗ್ರಹಿಸಿದರು.

ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಫೆಡರೇಷನ್ ಕರೆಯ ಮೇರೆಗೆ ಶುಕ್ರವಾರ ಮೂಡಿಗೆರೆ ಎಲ್‌ಐಸಿ ಕಚೇರಿಯ ಎದುರು ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘವು ಹಮ್ಮಿಕೊಂಡಿದ್ದ ‘ವಿಶ್ರಾಂತಿ ದಿನ ಪ್ರತಿಭಟನಾ ಆಂದೋಲನ’ದಲ್ಲಿ ಅವರು ಮಾತನಾಡಿದರು.

‘ಭಾರತೀಯ ಜೀವ ವಿಮಾ ಸಂಸ್ಥೆಯು ಲಾಭದಾಯಕವಾಗಿ ಬೆಳೆಯಲು ಪಾಲಿಸಿದಾರರ ಮತ್ತು ವಿಮಾ ಪ್ರತಿನಿಧಿಗಳ ಪಾತ್ರ ಮಹತ್ವದಾಗಿದೆ. ಸಂಸ್ಥೆಯ ಇತ್ತೀಚಿನ ಕೆಲವು ನಿಯಮಗಳು ಪಾಲಿಸಿದಾರರಿಗೆ ಮತ್ತು ವಿಮಾ ಪ್ರತಿನಿಧಿಗಳಿಗೆ ಪ್ರತಿಕೂಲಕರವಾಗಿವೆ. ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ದೇಶದಾದ್ಯಂತ ವಿಮಾ ಪ್ರತಿನಿಧಿಗಳ ಸಂಘ ಪ್ರತಿಭಟನಾ ಅಂದೋಲನ ಹಮ್ಮಿಕೊಂಡಿದೆ. ವಿಶ್ರಾಂತಿ ದಿನದಂದು ಪ್ರತಿನಿಧಿಗಳು ಯಾವುದೇ ಪಾಲಿಸಿಗಳನ್ನು ಕಚೇರಿಗೆ ಸಲ್ಲಿಸದೇ ತಮ್ಮ ಪ್ರತಿಭಟನೆಯನ್ನು ಸೂಚಿಸಲಾಗಿದೆ’ ಎಂದರು.

ADVERTISEMENT

ಸಂಘದ ಕಾರ್ಯದರ್ಶಿ ಕೆ.ಪಿ. ಶಿವಕುಮಾರ್ ಮಾತನಾಡಿ, ‘ವಿಮಾ ಪ್ರತಿನಿಧಿಗಳು ಹಾಗೂ ಪಾಲಿಸಿದಾರರ ಪರವಾಗಿ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ. ತಡಬಡ್ಡಿ ಮತ್ತು ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸಬೇಕು. ಪ್ರತಿನಿಧಿಗಳಿಗೆ ನೀಡುವ ಕಮಿಷನ್ ದರ ಮತ್ತು ಗ್ರಾಚುಟಿ ಮೊತ್ತವನ್ನು ಹೆಚ್ಚಿಸಬೇಕು. ಎಲ್ಲಾ ಪ್ರತಿನಿಧಿಗಳಿಗೆ ಕ್ಷೇಮ ನಿಧಿಯನ್ನು ಆರಂಭಿಸಿಬೇಕು ಮತ್ತು ಗುಂಪು ವೈದ್ಯಕೀಯ ವಿಮೆಯನ್ನು ಜಾರಿಗೊಳಿಸಬೇಕು. ಟರ್ಮ್ ಪಾಲಿಸಿ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಜೀವವಿಮಾ ಪ್ರತಿನಿಧಿಗಳ ಸಂಘದ ಗೌರವ ಅಧ್ಯಕ್ಷ ಬಿ.ಎಲ್. ಉಪೇಂದ್ರ, ಉಪಾಧ್ಯಕ್ಷ ಶಶಿಕಲಾ ಗೋಪಾಲಗೌಡ, ಸಹಕಾರ್ಯದರ್ಶಿ ಬಿ.ಎಲ್. ನಾಗರಾಜು, ಖಜಾಂಚಿ ಫ್ರಾನ್ಸಿಸ್ ಲೋಬೊ, ಸಂಘಟನಾ ಕಾರ್ಯದರ್ಶಿ ಎಚ್.ಜಿ. ಉತ್ತಮ್‍ಕುಮಾರ್, ಕಾರ್ಯಕಾರಿ ಸದಸ್ಯರಾದ ಬಿ.ಎಸ್. ಸಂತೋಷ್, ನೂರ್ ಅಹಮದ್, ಸುಚಿತ್ರಾ, ಲಲಿತಾ, ಕೆ.ಇ. ರಾಮಯ್ಯ, ಎಸ್.ಬಿ. ಕೃಷ್ಣೇಗೌಡ ಹಾಗೂ ವಿಮಾ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.