ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಪ.ಪಂಯ ವಾಣಿಜ್ಯ ಮಳಿಗೆ ಕಟ್ಟಡವು ಕಳಚಿ ಬೀಳುತ್ತಿದ್ದು, ವರ್ತಕರು ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ.
ಎರಡಂತಸ್ತಿನ ಕಟ್ಟಡದಲ್ಲಿ 12 ವಾಣಿಜ್ಯ ಮಳಿಗೆಗಳಿದ್ದು, ಎರಡುವರೆ ದಶಕಗಳ ಹಿಂದೆ ನಿರ್ಮಿಸಲಾಗಿದೆ. ಕಟ್ಟಡದ ಮೇಲ್ಭಾಗವು ಸಂಪೂರ್ಣವಾಗಿ ಹಾನಿಯಾಗಿದ್ದು, ಮೊದಲ ಅಂತಸ್ತಿನ ಮಳಿಗೆಗಳು ಮಳೆ ನೀರಿಗೆ ಸೋರುತ್ತಿವೆ. ವರ್ತಕರು ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ವ್ಯಾಪಾರ, ವಹಿವಾಟು ನಡೆಸುವಂತಾಗಿದೆ. ಮೊದಲ ಅಂತಸ್ತಿಗೆ ತೆರಳುವ ಮೆಟ್ಟಿಲ ಬಳಿ ಚಾವಣಿಯ ಗಾರೆ ಕಿತ್ತು ಕಬ್ಬಿಣ ಕಾಣತೊಡಗಿದ್ದು, ಇಲ್ಲಿಗೆ ತೆರಳಲು ವರ್ತಕರು ಹಾಗೂ ಗ್ರಾಹಕರು ಭಯ ಪಡುವಂತಾಗಿದೆ.
ಕಟ್ಟಡವನ್ನು ನೆಲಸಮಗೊಳಿಸಿ, ಮೂರು ಅಥವಾ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿದರೆ ಪಟ್ಟಣ ಪಂಚಾಯಿತಿಗೆ ಆದಾಯ ಬರುವುದಲ್ಲದೆ ಹೆಚ್ಚಿನ ವರ್ತಕರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
‘ಕಟ್ಟಡವು ಸಂಪೂರ್ಣವಾಗಿ ಹಾನಿಯಾಗಿದೆ. ಆರ್‌ಸಿಸಿ ಕಟ್ಟಡದಲ್ಲಿ ಮಳೆನೀರು ಹೋಗಲು ಸೂಕ್ತ ವ್ಯವಸ್ಥೆ ಮಾಡದ ಕಾರಣ, ಪ್ರತಿವರ್ಷ ಮಳೆ ನೀರು ಕಟ್ಟಡದ ಗೋಡೆಯೊಳಗೆ ಇಳಿದು ಗೋಡೆಗೆ ಹಾನಿಯಾಗಿದ್ದು, ಯಾವಾಗ ಬೀಳುತ್ತದೊ ಹೇಳದಾಗಿದೆ. ಇದನ್ನರಿತ ಕಟ್ಟಡದ ಬಹುತೇಕ ಮೂಲ ಬಾಡಿಗೆದಾರರು ಒಳ ಬಾಡಿಗೆಗೆ ನೀಡಿ, ದುಬಾರಿ ಬಾಡಿಗೆ ಪಡೆಯುತ್ತಿದ್ದಾರೆ. ಪಟ್ಟಣ ಪಂಚಾಯಿತಿಗೆ ಮಾತ್ರ ಬಿಡಿಗಾಸು ಬಾಡಿಗೆಯಾಗಿದೆ. ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಕಟ್ಟಡವು ಇನ್ನಷ್ಟು ಹಾನಿಯಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮೊದಲು ಬದಲು ಕ್ರಮ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಪಟ್ಟಣದ ನಿವಾಸಿ ಸುಂದರೇಶ್.
ನೆರೆಯ ತಾಲ್ಲೂಕು ಬೇಲೂರಿನಲ್ಲಿ ಹಳೆ ಕಟ್ಟಡ ಕುಸಿದು ಜೀವ ಹಾನಿಯಾದ ಘಟನೆಯು ಈ ಕಟ್ಟಡಕ್ಕೂ ಆವರಿಸಿದ್ದು, ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ರಕ್ಷಣಾ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.