ADVERTISEMENT

ವಾಹನ ದಟ್ಟಣೆ ಪರಿಹರಿಸಲು ಆಗ್ರಹ

ಮೂಡಿಗೆರೆ: ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 6:28 IST
Last Updated 9 ಜುಲೈ 2025, 6:28 IST
ಮೂಡಿಗೆರೆ ಪ.ಪಂ. ಸಭಾಂಗಣದಲ್ಲಿ ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸಾರ್ವಜನಿಕ ಸಭೆ ನಡೆಸಲಾಯಿತು
ಮೂಡಿಗೆರೆ ಪ.ಪಂ. ಸಭಾಂಗಣದಲ್ಲಿ ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸಾರ್ವಜನಿಕ ಸಭೆ ನಡೆಸಲಾಯಿತು   

ಮೂಡಿಗೆರೆ: ಪಟ್ಟಣದಲ್ಲಿ ಪ್ರತಿನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ. ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣ ಪಂಚಾಯಿತಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳು, ಸಂಘ– ಸಂಸ್ಥೆಗಳು, ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಅವರು ಹಲವು ಸಮಸ್ಯೆಗಳನ್ನು ತೆರೆದಿಟ್ಟರು.

ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿದೆ. ಒಂದು ಮನೆಯಲ್ಲಿ ಎರಡರಿಂದ ಮೂರು ಕಾರುಗಳಿವೆ. ಎಲ್ಲಾ ಮನೆ, ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಮನೆ ಮಾಲೀಕರು, ಬಾಡಿಗೆ ಇರುವವರು ಸಾರ್ವಜನಿಕ ರಸ್ತೆಯನ್ನೇ ಆಕ್ರಮಿಸಿಕೊಂಡು ವಾರ, ತಿಂಗಳುಗಟ್ಟಲೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅಂಗಡಿ ಮಾಲೀಕರು ಅಂಗಡಿ ಮುಂದೆಯೇ ವಾಹನ ನಿಲ್ಲಿಸುತ್ತಿದ್ದು, ಇದರಿಂದ ವಾಹನ ಸಂಚಾರ, ಪಾರ್ಕಿಂಗ್‍ಗೆ ಅಡ್ಡಿಯಾಗುತ್ತಿದೆ. ಪಾದಾಚಾರಿಗಳು ರಸ್ತೆಯಲ್ಲಿಯೇ ನಡೆಯುವ ಸ್ಥಿತಿ ಉಂಟಾಗಿದೆ. ವಾಹನ ನಿಲುಗಡೆಗೆ ರಸ್ತೆ ಆಕ್ರಮಿಸಿಕೊಂಡಿರುವವರ ವಿರುದ್ಧ ಪೊಲೀಸರು ಕ್ರಮ ವಹಿಸಿದರೆ ಶೇ 90ರಷ್ಟು ಪಾರ್ಕಿಂಗ್ ಸಮಸ್ಯೆ ಬಗೆಹರಿಯುತ್ತದೆ ಎಂದರು.

ADVERTISEMENT

ಬಹುತೇಕ ರಸ್ತೆಗಳ ಬದಿ ಚರಂಡಿಗಳು ಬಾಯಿ ತೆರೆದುಕೊಂಡಿವೆ. ಕೆಲವು ಕಡೆ ಮಳೆಯಿಂದ ರಸ್ತೆಬದಿ ಗುಂಡಿಗಳಾಗಿವೆ. ಅವುಗಳನ್ನು ಪ.ಪಂ. ಸರಿಪಡಿಸುತ್ತಿಲ್ಲ. ಕೆಲವು ಅಂಗಡಿ ಮಾಲೀಕರು ಚೈನ್ ಹಾಕಿ ರಸ್ತೆ ಆಕ್ರಮಿಸಿದ್ದಾರೆ. ಇದರಿಂದಲೂ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಇನ್ನು ಮುಂದೆ ಹೊಸ ಮನೆ ಕಟ್ಟುವವರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವವರಿಗೆ ಮಾತ್ರ ಅನುಮತಿ ನೀಡುವ ಬಗ್ಗೆ ಪ.ಪಂ. ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ. ವೆಂಕಟೇಶ್ ಮಾತನಾಡಿ, ಎಂ.ಜಿ ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸುವವರ ಮನವೊಲಿಸಿ ರಸ್ತೆ ಅಗಲೀಕರಣಕ್ಕೆ ಪ್ರಯತ್ನಿಸಲಾಗುವುದು. ₹15 ಲಕ್ಷ ವೆಚ್ಚದಲ್ಲಿ ಪ್ರಮುಖ ರಸ್ತೆ ಬದಿಯಲ್ಲಿರುವ ಚರಂಡಿಯನ್ನು ಮುಚ್ಚಿಸಿ ಪಾರ್ಕಿಂಗ್ ವ್ಯವಸ್ಥೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್ ರಾಜಶೇಖರ್ ಮಾತನಾಡಿ, ‌ವಾಹನ ನಿಲುಗಡೆಗೆ ರಸ್ತೆ ಆಕ್ರಮಿಸಿಕೊಂಡಿರುವವರ ವಿರುದ್ಧ ಕ್ರಮ ವಹಿಸಲಾಗುವುದು. ಪಾರ್ಕಿಂಗ್ ವ್ಯವಸ್ಥೆಗೆ ಕೆಲವು ಕಡೆ ಜಾಗ ಗುರುತಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.

ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಅನುಕುಮಾರ್, ಸುಧೀರ್, ಮನೋಜ್, ಹಂಝಾ, ಆಶಾ ಮೋಹನ್, ಗೀತಾ ರಂಜನ್, ಮುಖಂಡರಾದ ಜಿ.ಎಚ್. ಹಾಲಪ್ಪ ಗೌಡ, ರಂಜನ್ ಅಜಿತ್ ಕುಮಾರ್, ಉಮೇಶ್ ಹೊಯ್ಸಳಲು, ಬ್ರಿಜೇಶ್ ಕಡಿದಾಳ್, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.