ADVERTISEMENT

ಮುಳ್ಳಯ್ಯನಗಿರಿ: ಆನ್‌ಲೈನ್‌ ಬುಕ್ಕಿಂಗ್ ಬಳಿಕ ದಟ್ಟಣೆ ಸುಧಾರಣೆ

ಮುಳ್ಳಯ್ಯನಗಿರಿ ಪ್ರವಾಸಕ್ಕೆ ವಾಹನಗಳ ಸಂಖ್ಯೆ ಮಿತಿ

ವಿಜಯಕುಮಾರ್ ಎಸ್.ಕೆ.
Published 8 ಅಕ್ಟೋಬರ್ 2025, 8:00 IST
Last Updated 8 ಅಕ್ಟೋಬರ್ 2025, 8:00 IST
ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರು –ಸಾಂದರ್ಭಿಕ ಚಿತ್ರ
ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರು –ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಜಿಲ್ಲಾಡಳಿತ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಿದ ಬಳಿಕ ಗಿರಿಭಾಗದಲ್ಲಿ ದಟ್ಟಣೆ ಸುಧಾರಣೆಗೆ ಬಂದಿದೆ.

ವಾರಾಂತ್ಯ ಮತ್ತು ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಗಾಳಿಕೆರೆ, ಝರಿ ಜಲಪಾತ, ಹೊನ್ನಮ್ಮನಹಳ್ಳ ವೀಕ್ಷಣೆಗೆ ಜನ ಮುಗಿ ಬೀಳುವುದು ಸಾಮಾನ್ಯ. ಲೆಕ್ಕವಿಲ್ಲದಷ್ಟು ವಾಹನಗಳು ಗಿರಿ ಏರಿ ಉಂಟಾಗುತ್ತಿದ್ದ ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರೂ ನರಳುತ್ತಿದ್ದರು.

ಇದನ್ನು ತಪ್ಪಿಸಲು ಏಕಕಾಲಕ್ಕೆ 600 (ದಿನಕ್ಕೆ 1,200) ವಾಹನಗಳಿಗಷ್ಟೇ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿತು. ಈ ನಿರ್ಧಾರ ಕೈಗೊಂಡ ಬಳಿಕ ಆಯುಧ ಪೂಜೆ ಮತ್ತು ವಾರಾಂತ್ಯಗಳಲ್ಲಿ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದರು. ಆದರೂ, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಯಲ್ಲಿ ವಾಹನ ದಟ್ಟಣೆಯ ಸಮಸ್ಯೆ ಪ್ರವಾಸಿಗರನ್ನು ಕಾಡಲಿಲ್ಲ. ಆನ್‌ಲೈನ್ ಬುಕ್ಕಿಂಗ್ ಮಾಡಿರುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಉಳಿದ ಪ್ರವಾಸಿಗರನ್ನು ಬೇರೆ ಕಡೆಗೆ ಕಳುಹಿಸುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು. ಈ ವೇಳೆ ಕೈಮರ ಬಳಿ ತರೀಕೆರೆ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.

ADVERTISEMENT

ಪ್ರಾಯೋಗಿಕವಾಗಿ 1,200 ವಾಹನಗಳಿಗೆ ಸೀಮಿತಗೊಳಿಸಿದ್ದ ಜಿಲ್ಲಾಡಳಿತ, 1,600 ವಾಹನಗಳ ತನಕ ಅವಕಾಶ ನೀಡಿತು. ಗಿರಿಭಾಗದಿಂದ ವಾಹನಗಳು ವಾಪಸ್ ಬಂದಂತೆ ಬೇರೆ ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ದಟ್ಟಣೆ ಇಲ್ಲ ಎಂಬುದನ್ನು ಗಮನಿಸಿಕೊಂಡು ಚೆಕ್‌ಪೋಸ್ಟ್‌ನಲ್ಲೇ ಸ್ಕ್ಯಾನಿಂಗ್ ಮಾಡಿಸಿ ಶುಲ್ಕ ಪಾವತಿಸಿಕೊಂಡು ವಾಹನಗಳನ್ನು ಬಿಡಲಾಗುತ್ತಿದೆ. ಇದರಿಂದ ಗಿರಿ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯಿಂದ ತೊಂದರೆಯಾಗಲಿದೆ ಎಂದು ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ದ ಗಿರಿಭಾಗದ ಗ್ರಾಮಗಳ ನಿವಾಸಿಗಳು ಮತ್ತು ಜೀಪ್‌ ಚಾಲಕರು ಈಗ ಸಮಾಧಾನಗೊಂಡಿದ್ದಾರೆ. ‘ವಾಹನ ದಟ್ಟಣೆ ಇಲ್ಲದೆ ವಾರಾಂತ್ಯಗಳಲ್ಲಿ ಪ್ರವಾಸಿಗರು ಪ್ರಕೃತಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ. ಎಲ್ಲರಿಗೂ ಅನುಕೂಲ ಆಗಿದೆ’ ಎನ್ನುತ್ತಾರೆ ಜೀಪ್ ಚಾಲಕ ಅತ್ತಿಗುಂಡಿ ಮೋಹನ್.

ಕೆಲ ಸಂದರ್ಭಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್ ಇಲ್ಲದವರಿಗೂ ಹಣ ಪಡೆದು ಸಿಬ್ಬಂದಿ ಅವಕಾಶ ನೀಡುತ್ತಿದ್ದಾರೆ. ಈ ಸಮಸ್ಯೆ ಸರಿಪಡಿಸಿದರೆ ಎಲ್ಲವೂ ಸರಿಯಾಗಲಿದೆ ಎಂಬುದು ಸ್ಥಳೀಯರ ಸಲಹೆ. 

Cut-off box - ವಾಹನಗಳ ಮಿತಿ ಹೆಚ್ಚಳ ಮುಳ್ಳಯ್ಯನಗಿರಿ ಭಾಗಕ್ಕೆ ಏಕಕಾಲಕ್ಕೆ 600 ವಾಹನಗಳಿಗೆ ಸೀಮಿತ ಮಾಡಲಾಗಿತ್ತು. ಪ್ರಾಯೋಗಿಕವಾಗಿ ಕೆಲ ದಿನಗಳ ಕಾಲ ನಿರ್ವಹಣೆ ಮಾಡಿದ ನಂತರ ಇನ್ನೂ ಹೆಚ್ಚುವರಿ 200 ವಾಹನಗಳಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ‘ದಿನಕ್ಕೆ 1600 ವಾಹನಗಳು ಹೋಗಿ ಬಂದರೂ ವಾರಾಂತ್ಯದಲ್ಲಿ ದಟ್ಟಣೆ ಉಂಟಾಗಲಿಲ್ಲ. ವಾಹನಗಳು ಗಿರಿ ಇಳಿದಂತೆ ಬೇರೆ ವಾಹನಗಳಿಗೆ ಅವಕಾಶ ಕಲ್ಪಿಸಿದ್ದೆವು. ಮುಳ್ಳಯ್ಯನಗಿರಿಯಲ್ಲಿ ಹೆಚ್ಚು ವಾಹನಗಳಿದ್ದಾಗ ಆ ಭಾಗಕ್ಕೆ ವಾಹನ ಸಂಚಾರ ನಿಲ್ಲಿಸಿ ಬಾಬಾಬುಡನ್‌ಗಿರಿ ಕಡೆಗೆ ಕಳುಹಿಸಲಾಗುತ್ತಿದೆ. ಆದ್ದರಿಂದ ಎಲ್ಲಿಯೂ ವಾಹನ ದಟ್ಟಣೆ ಉಂಟಾಗುತ್ತಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್ ತಿಳಿಸಿದರು.

ಬೇರೆ ಪ್ರವಾಸಿ ತಾಣ: ರಸ್ತೆ ಕೊರತೆ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿದ ಬಳಿಕ ಜಿಲ್ಲೆಯ ಬೇರೆ ಪ್ರವಾಸಿ ತಾಣಗಳಿಗೆ ಹೋಗಲು ಪ್ರವಾಸಿಗರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ರಸ್ತೆ ಸೇರಿ ಯಾವುದೇ ಮೂಲಸೌಕರ್ಯ ಇಲ್ಲದಿರುವುದು ಪ್ರವಾಸಿಗರಿಗೆ ತೊಂದರೆಯಾಗಿದೆ. ಮೂಡಿಗೆರೆ ಕಳಸ ತಾಲ್ಲೂಕಿನಲ್ಲಿ ಹೆಚ್ಚಿನ ಪರಿಸರ ಪ್ರವಾಸಿ ತಾಣಗಳಿವೆ.

ಆದರೆ ಅವುಗಳಿಗೆ ಹೋಗುವ ದಾರಿ ಸರಿಪಡಿಸಬೇಕು ಮತ್ತು ಅವುಗಳನ್ನು ಮ್ಯಾಪಿಂಗ್ ಮಾಡಿ ಹೆಚ್ಚಿನ ಪ್ರಚಾರವನ್ನು ಪ್ರವಾಸೋದ್ಯಮ ಇಲಾಖೆ ನೀಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ. ‘ರಾಣಿಝರಿ ರಸ್ತೆ ಸಂಪೂರ್ಣ ಹಾಳಾಗಿದೆ. ಕೊಡಿಗೆ ಜಲಪಾತಕ್ಕೆ ರಸ್ತೆಯೇ ಇಲ್ಲ. ಎತ್ತಿನಭುಜದಿಂದ ದೇವರಮನೆ ಪ್ರಕೃತಿ ತಾಣಕ್ಕೆ 12 ಕಿಲೋ ಮೀಟರ್ ದೂರವಿದೆ. ಆದರೆ ರಸ್ತೆ ಸಂಪೂರ್ಣ ಹಾಳಾಗಿದೆ. ಎಲ್ಲಿಯೂ ಶೌಚಾಲಯ ಸೇರಿ ಮೂಲ ಸೌಕರ್ಯ ಇಲ್ಲ. ಇವುಗಳನ್ನು ಸರಿಪಡಿಸಿದರೆ ಕಳಸ ಮತ್ತು ಮೂಡಿಗೆರೆ ತಾಲ್ಲೂಕಿಗೆ ಪ್ರವಾಸಿಗರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಅವಕಾಶ ಇದೆ’ ಎಂದು ಭಾರತೀಯ ಕಿಸಾನ್ ಸಂಘದ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ್‌ಗೌಡ ಕೊಟ್ಟೆಗೆಹಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.