
ತರೀಕೆರೆ: ಪಟ್ಟಣದ ಎಂ.ಜಿ. ರಸ್ತೆಯ ನಾಗರ ದೇವಸ್ಥಾನದಲ್ಲಿ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯ್ದ ಸದಸ್ಯರಿಗೆ ಕೃಷಿ ಸ್ವಉದ್ಯೋಗ ಅಂಗವಾಗಿ ಅಣಬೆ ಬೇಸಾಯ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಚಂದನ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಣಬೆ ಅತಿ ಮುಖ್ಯ ಪೌಷ್ಟಿಕ ಆಹಾರವಾಗಿ ಪರಿಚಯವಾಗುತ್ತಿದೆ. ಗುಣಮಟ್ಟದ ಅಣಬೆ ಅಪೌಷ್ಟಿಕತೆ ನಿಯಂತ್ರಣ, ಅವಶ್ಯಕ ಪೋಷಕಾಂಶ ಜೀವಸತ್ವ ಬಿ,ಡಿ ಹಾಗೂ ಖನಿಜ ಮತ್ತು ನಾರು ಹೊಂದಿದೆ ಎಂದರು.
ಅಣಬೆ ಕ್ಯಾನ್ಸರ್, ಹೃದಯ ಕಾಯಿಲೆ, ಬೊಜ್ಜು ನಿರ್ವಹಣೆ ಮತ್ತು ರೋಗ ನಿರೋಧಕ ವೃದ್ಧಿಗೆ ಸಹಾಯಕವಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್ ಮತ್ತು ಕಬ್ಬಿಣಾಂಶದಿಂದ ರಕ್ತಹೀನತೆ ಸಮಸ್ಯೆಗೆ ಪರಿಹಾರ ದೊರಕಲಿದೆ. ಅಣಬೆ ಸಂಸ್ಕರಣ ವಿಧಾನ ಮತ್ತು ಇದರಿಂದ ತಯಾರಿಸುವ ಅನೇಕ ಮೌಲ್ಯವರ್ದಿತ ಉತ್ಪನ್ನ ತಯಾರಿಕೆ, ಸೂಪ್, ಉಪ್ಪಿನಕಾಯಿ ತಯಾರಿಕೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಸದಸ್ಯರಿಗೆ ಅಣಬೆ ಪ್ಯಾಕಿಂಗ್, ಬ್ಯಾಂಡಿಂಗ್, ಮಾರುಕಟ್ಟೆ ಕುರಿತು ಸಮಗ್ರ ಮಾಹಿತಿ ನೀಡಿ ಅಣಬೆ ಬೇಸಾಯ ಕುರಿತು ಪ್ರಾತ್ಯಕ್ಷತೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಸಂತೋಷ್, ವಲಯ ಮೇಲ್ವಿಚಾರಕಿ ಭಾರತಿ ಹೆಗ್ಡೆ, ಸೇವಾ ಪ್ರತಿನಿಧಿ ದ್ರಾಕ್ಷಾಯಿಣಿ, ಸುಮಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.