ಮುತ್ತಿನಕೊಪ್ಪ(ಎನ್.ಆರ್.ಪುರ): ಮುತ್ತಿನಕೊಪ್ಪದಲ್ಲಿ ನಿರ್ಮಿಸಿರುವ ಮೆಸ್ಕಾಂ ಶಾಖಾಧಿಕಾರಿ ಕಚೇರಿ (ಸೆಕ್ಷನ್ ಆಫೀಸ್) ಕಾರ್ಯ ಮತ್ತು ಪಾಲನೆ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಕಟ್ಟಡ ಮುಂಭಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.
ಮುತ್ತಿನಕೊಪ್ಪದಲ್ಲಿ 2004ರಲ್ಲಿ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗಿತ್ತು. ಹಲವು ವರ್ಷಗಳವರೆಗೆ ಇಲ್ಲಿ ಇಬ್ಬರು ಪವರ್‌ಮ್ಯಾನ್‌ಗಳು ಕಾರ್ಯನಿರ್ವಹಿಸುತ್ತಿದ್ದರು. ಮೆಸ್ಕಾಂಗೆ ಸಂಬಂಧಿಸಿದ ಕಚೇರಿ ಇರಲಿಲ್ಲ. 2015ರ ವೇಳೆಗೆ ಹೊಸದಾಗಿ ಸಹಾಯಕ ಎಂಜಿನಿಯರ್ ಹುದ್ದೆಯನ್ನು ಸೃಷ್ಟಿಸಿ, ಮೆಸ್ಕಾಂ ಶಾಖಾಧಿಕಾರಿ ಕಚೇರಿ ಆರಂಭಿಸಲಾಯಿತು. 10 ವರ್ಷಗಳಿಂದ (ಪ್ರತಿ ತಿಂಗಳು ಬಾಡಿಗೆ ₹5,500) ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 2023ರಲ್ಲಿ ಪವರ್‌ಮೆನ್‌ಗಳ ವಸತಿ ಗೃಹವಿದ್ದ ಜಾಗದಲ್ಲಿ ಶಾಖಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಸರ್ಕಾರದಿಂದ ಬಿಡುಗಡೆಯಾದ ₹40 ಲಕ್ಷ ಅನುದಾನದಲ್ಲಿ ಕಚೇರಿ ಕಟ್ಟಡ ಪೂರ್ಣಗೊಂಡು ಏಳೆಂಟು ತಿಂಗಳು ಕಳೆದಿದ್ದರೂ ಉದ್ಘಾಟಿಸಲು ಮೆಸ್ಕಾಂ ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸ್ವಂತ ಕಟ್ಟಡ ನಿರ್ಮಾಣವಾಗಿದ್ದರೂ ಅಲ್ಲಿಗೆ ಕಚೇರಿಯನ್ನು ಸ್ಥಳಾಂತರಿಸದಿರುವುದರಿಂದ ಸರ್ಕಾರಕ್ಕೆ ಬಾಡಿಗೆ ನಷ್ಟವಾಗುತ್ತಿದೆ. ಉದ್ಘಾಟನೆ ಮಾಡದೆ ವಿಳಂಬ ಮಾಡುತ್ತಿರುವುದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಸಾರ್ವಜನಿಕರ ಆರೋಪ.
ಈಗಿರುವ ಮೆಸ್ಕಾಂ ಶಾಖಾಧಿಕಾರಿ ಕಚೇರಿ ಮೇಲಂತಸ್ತಿನಲ್ಲಿದ್ದು, ಇಲ್ಲಿಗೆ ಹೋಗಲು ವಯೋವೃದ್ಧರು ಕಷ್ಟ ಪಡುವಂತಾಗಿದೆ. ಸ್ವಂತ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದರೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರಕ್ಕೆ ನಷ್ಟವನ್ನುಂಟು ಮಾಡುತ್ತದೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ತಿಳಿಸಿದರು.
ಮೆಸ್ಕಾಂನ ಸ್ವಂತ ಕಟ್ಟಡ ನಿರ್ಮಾಣವಾಗಿದ್ದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಮಂಜಸವಲ್ಲ. ತಾಂತ್ರಿಕ ಸಮಸ್ಯೆಯಿದ್ದರೂ ಕಟ್ಟಡವನ್ನು ಉದ್ಘಾಟಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಗಮನಹರಿಸಬೇಕು ಎಂದು ತಾಲ್ಲೂಕು ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದರು.
ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ಸಮಯ ಕೇಳಲಾಗಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೌತಮ್ ತಿಳಿಸಿದರು.
ಕ್ಷೇತ್ರದಲ್ಲಿ ಹಲವು ಇಲಾಖೆಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿವೆ. ಇವೆಲ್ಲವನ್ನೂ ಏಕಕಾಲದಲ್ಲಿ ಲೋಕಾರ್ಪಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಸಮಯ ನಿಗದಿಪಡಿಸಿ ಶೀಘ್ರದಲ್ಲಿ ಉದ್ಘಾಟಿಸಲಾಗುವುದುಟಿ.ಡಿ.ರಾಜೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.