ADVERTISEMENT

ನಮ್ಮ ಕ್ಲಿನಿಕ್’ ನಿಂದ ಮಲೆನಾಡಿಗರು ವಂಚಿತ: ಶಾಸಕ ಟಿ.ಡಿ. ರಾಜೇಗೌಡ

ಶಾಸಕ ಟಿ.ಡಿ. ರಾಜೇಗೌಡ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 6:14 IST
Last Updated 15 ಡಿಸೆಂಬರ್ 2022, 6:14 IST
ರಾಜೇಗೌಡ
ರಾಜೇಗೌಡ   

ಕೊಪ್ಪ: ‘ಮುಖ್ಯಮಂತ್ರಿ ಜಾರಿಗೆ ತಂದಿರುವ ‘ನಮ್ಮ ಕ್ಲಿನಿಕ್’ ಯೋಜನೆಯಿಂದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಕಳಸ, ಮೂಡಿಗೆರೆ ತಾಲ್ಲೂಕುಗಳು ವಂಚಿತಗೊಂಡಿವೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆಕ್ಷೇಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈ ಯೋಜನೆಯನ್ನು ಕಡೂರು, ತರೀಕೆರೆ, ಬೀರೂರು, ಚಿಕ್ಕಮಗಳೂರಿಗೆ ಸೀಮಿತಗೊಳಿಸಲಾಗಿದೆ. ನಗರಕ್ಕೆ ಹತ್ತಿರದಲ್ಲಿರುವ ಈ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಅಲ್ಲಿಗೆ ಯೋಜನೆ ಕೊಡಬಾರದು ಎಂದು ನಾನು ಹೇಳುವುದಿಲ್ಲ. ಆದರೆ, ಗಂಭೀರ ಸಮಸ್ಯೆಗಳು ಇರುವ ಮಲೆನಾಡಿನ ಭಾಗದಲ್ಲೂ ನಮ್ಮ ಕ್ಲಿನಿಕ್‌ ಆರಂಭಿಸಬೇಕು’ ಎಂದು ಆಗ್ರಹಿಸಿದರು.

‘ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲಿ ಕೊಯಿಲು ಮಾಡಿ ಹಾಕಿದ ಭತ್ತದ ತೆನೆ ಮೊಳಕೆ ಯೊಡೆಯುತ್ತಿದೆ. ಎಲೆಚುಕ್ಕಿ ರೋಗ ವ್ಯಾಪಕವಾ ಗಿದ್ದು, ಅಡಿಕೆ ಮರಗಳು ಸಾಯುತ್ತಿವೆ. ಹಳದಿ ಎಲೆ ರೋಗಕ್ಕೆ ವಿಜ್ಞಾನಿಗಳು ಸೂಕ್ತ ಔಷಧ ಈವರೆಗೂ ಕಂಡು ಹಿಡಿದಿಲ್ಲ. ಕಾಫಿ ಕಾಯಿ ಉದುರುತ್ತಿದೆ. ರೈತ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತನಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ’ ಎಂದು ಆರೋಪಿಸಿದರು.

ADVERTISEMENT

ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ರಶೀದ್, ಮೈತ್ರಿ, ಶ್ರೀನಿವಾಸ್ ಶೆಟ್ಟಿ, ಮಾಜಿ ಅಧ್ಯಕ್ಷೆ ಸಿ.ಕೆ.ಮಾಲತಿ, ತಾಲ್ಲೂಕು ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ನಾರ್ವೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.