ADVERTISEMENT

ನರಸಿಂಹರಾಜಪುರ | ಅತಿವೃಷ್ಟಿಯಿಂದ 29 ಮನೆಗಳಿಗೆ ಹಾನಿ: ತಹಶೀಲ್ದಾರ್ ನೂರುಲ್ ಹುದಾ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:07 IST
Last Updated 21 ಆಗಸ್ಟ್ 2025, 5:07 IST
ನರಸಿಂಹರಾಜಪುರದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ಅತಿವೃಷ್ಟಿ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ನರಸಿಂಹರಾಜಪುರದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ಅತಿವೃಷ್ಟಿ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ನರಸಿಂಹರಾಜಪುರ: ಜೂನ್‌ನಿಂದ ಆಗಸ್ಟ್ 18ರವರೆಗೆ ತಾಲ್ಲೂಕಿನಲ್ಲಿ 29 ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ನೂರುಲ್ ಹುದಾ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹಾನಿಗೊಳಗಾದ ಮನೆಗಳಲ್ಲಿ ನಾಲ್ಕು ಮನೆಗಳಿಗೆ ಪರಿಹಾರ ಪಾವತಿಸಲಾಗಿದೆ. ಪರಿಹಾರ ಪಾವತಿಸಲು ಬಾಕಿ ಇರುವ ಐದು ಪ್ರಕರಣಗಳು ಇವೆ. ಉಪವಿಭಾಗಾಧಿಕಾರಿ ಕಚೇರಿಗೆ ನಾಲ್ಕು ಪ್ರಕರಣಗಳನ್ನು ಕಳುಹಿಸಲಾಗಿದೆ. ತಾಂತ್ರಿಕ ವರದಿಗೆ 5 ಕಡತಗಳು ಬಾಕಿ ಇವೆ. ತಾತ್ಕಾಲಿಕ ವಿಲೇ ಇಡಲಾದ ಕಡತಗಳು 4 ಇವೆ. ಪರಿಹಾರ ಪಾವತಿಸಲು ಸೂಕ್ತ ದಾಖಲೆಯಿರುವ ಮನೆಗಳ ಮಾಹಿತಿಯನ್ನು ಶೀಘ್ರ ಒದಗಿಸಬೇಕು. ಇ ಪೌತಿ ಖಾತೆಯ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದರು.

ADVERTISEMENT

ಅನಧಿಕೃತ ವಾಸದ ಮನೆಗಳಿಗೆ ಶೇ 75ರಷ್ಟು ಹಾನಿ ಸಂಭವಿಸಿದರೆ ₹1ಲಕ್ಷದವರೆಗೆ ಪರಿಹಾರ ಕೊಡಲು ಅವಕಾಶವಿದೆ. ಅಧಿಕೃತ ಮನೆಗಳು ಹಾನಿಗೆ ಒಳಗಾದರೆ ₹3 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್ ಮಾತನಾಡಿ, ಹಿಂದೆ ಮನೆಗಳು ಹಾನಿಯಾಗಿದ್ದು, ಹೊಸ ಮನೆ ನಿರ್ಮಿಸಿಕೊಂಡಿದ್ದವರಿಗೆ ಪುನಃ ಪರಿಹಾರ ನೀಡಬಾರದು. ಈ ರೀತಿ ತಾಲ್ಲೂಕಿನಲ್ಲಿ ಎರಡು ಪ್ರಕರಣ ಕಂಡು ಬಂದಿದ್ದು ಪರಿಹಾರ ವಸೂಲಿ ಮಾಡುವುದಕ್ಕೆ ಆದೇಶವಾಗಿದೆ. ಈ ಬಗ್ಗೆ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಎಇಇ ಕೆ.ಟಿ.ಸಾಗರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.