ADVERTISEMENT

ಧರ್ಮನಿಷ್ಠೆ ತೋರಿಸಲು ಹಿಂದೂ ಸಮಾಜೋತ್ಸವ ಉತ್ತಮ ಅವಕಾಶ

ಹಿಂದೂ ಸಮಾಜೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:28 IST
Last Updated 24 ಜನವರಿ 2026, 7:28 IST
ನರಸಿಂಹರಾಜಪುರದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು
ನರಸಿಂಹರಾಜಪುರದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು   

ನರಸಿಂಹರಾಜಪುರ: ದೇಶ ನಿಷ್ಠೆ, ಧರ್ಮ ನಿಷ್ಠೆ ತೋರಿಸಲು ಹಿಂದೂ ಸಮಾಜೋತ್ಸವ ಉತ್ತಮ ಅವಕಾಶವಾಗಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಫೆ. 1ರಂದು ಪಟ್ಟಣದಲ್ಲಿ ಆಯೋಜಿಸಿರುವ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹಿಂದೂ ಸಮಾಜೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಶೋಭಾಯಾತ್ರೆಯಲ್ಲಿ, ಮುಖ್ಯರಸ್ತೆಯ ಎರಡು ಕಡೆ ಹೆಜ್ಜೆಗೊಂದು ದೀಪ ಹಚ್ಚಿ ಅಖಂಡ ದೀಪೋತ್ಸವ ಆಚರಿಸಬೇಕು. ನಗರದ ಪ್ರತಿಯೊಂದು ದೇವಸ್ಥಾನದಿಂದ ದೀಪವನ್ನು ತಂದು ಮುಖ್ಯರಸ್ತೆಯಲ್ಲಿ ಬೆಳಗಬೇಕು. ಹಿಂದೂ ಸಮಾಜೋತ್ಸವ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ, ಅದು ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತವೆ ಎಂದರು.

ADVERTISEMENT

ಭಾಷೆ, ವೇಷ, ಪ್ರಾಂತ, ಪಂಥ, ಪಕ್ಷ, ಪೂಜೆ ಎಲ್ಲಾ ವಿಧಿ ವೈವಿಧ್ಯಗಳ ನಡುವೆ ಏಕತೆ ಸಾರಬೇಕು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸಂದೇಶವನ್ನು ಸಮಾವೇಶ ಸಾರಬೇಕಾಗಿದೆ. ದೇಶಭಕ್ತರ ಧ್ವನಿಗೂಡಿಸಿ ದೇಶ ದ್ರೋಹಿಗಳ ಧ್ವನಿ ಕುಗ್ಗಿಸಬೇಕು. ಮೇಲು ಕೀಳುಗಳ ಭಾವ ಅಳಿಸಿ ಹಾಕಬೇಕು. ಹಿಂದೂ ಶಕ್ತಿಯ ಅರಿವು ಮೂಡಿಸಲು, ನೊಂದ ಬಾಂಧವರ ಮನತಣಿಸುವ ಕೆಲಸ ಮಾಡಬೇಕು. ದೇಶ, ಧರ್ಮ, ಸಂಸ್ಕಾರ, ಸಂಸ್ಕೃತಿ ಉಳಿದರೆ ವ್ಯಾಪಾರ, ವ್ಯವಹಾರ, ಆಸ್ತಿ ಉಳಿಯಲು ಸಾಧ್ಯವಾಗುತ್ತದೆ. ಸಮಾಜವಿಲ್ಲದಿದ್ದರೆ ಕುಟುಂಬವಿರಲು ಸಾಧ್ಯವಿಲ್ಲ. ಧರ್ಮ ಸಂಸ್ಕೃತಿ, ದೇಶ ರಕ್ಷಣೆ ವಿಚಾರ ಬಂದಾಗ ಮಠದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು. 

ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ರಾಜೇಂದ್ರ ಮಾತನಾಡಿ, ಶೋಭಾಯಾತ್ರೆಯು ಬಸ್ತಿಮಠದ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿಯಿಂದ ಕೋಟೆ ಮಾರಿಕಾಂಬ ಆವರಣದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಹಾಗೂ ಹಳೇಪೇಟೆ ಗುತ್ತ್ಯಮ್ಮ ದೇವಸ್ಥಾನದಿಂದ ವಾಟರ್ ಟ್ಯಾಂಕ್ ವೃತ್ತದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಪನ್ಮಗೊಳ್ಳಲಿದೆ. ನಂತರ ನಡೆಯುವ ಸಮಾರಂಭದಲ್ಲಿ ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಯಾದವ ಕೃಷ್ಣ ದಿಕ್ಸೂಚಿ ಭಾಷಣ ಮಾಡುವರು. ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಎ.ಎಸ್. ಕೃಷ್ಣಯ್ಯ ಅಧ್ಯಕ್ಷತೆ ವಹಿಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಪಾಲ್ಗೊಳ್ಳಲಿದ್ದಾರೆ ಎಂದರು. 

ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯ ಸಂಯೋಜಕ ವೈ.ಎಸ್. ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಎಸ್.ಎಸ್. ಸಂತೋಷ್ ಕುಮಾರ್, ವೈ.ಎಸ್. ರವಿ, ಪ್ರೇಮಾ ಶ್ರೀನಿವಾಸ್, ಭಾಗ್ಯನಂಜುಂಡಸ್ವಾಮಿ, ರವಿಶಂಕರ್, ಭಾನುಮತಿ, ಅರುಣ್ ಕುಮಾರ್ ಜೈನ್, ಅರವಿಂದ ಆಚಾರ್, ರಾಜಶೇಖರ್, ಮಂಜುನಾಥ್, ಸುಧಾಕರ್, ಜಾನಕಿ, ವಾಸಂತಿ, ಶೈಲಾ ಚಂದ್ರಶೇಖರ್, ಶಾಂತರಾಜ್, ಸೋಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.