ADVERTISEMENT

ನರಸಿಂಹರಾಜಪುರ | ಮಿನಿ ವಿಧಾನಸೌಧ ಗೋಡೆ ಬಿರುಕು: ಕಳಪೆ ಕಾಮಗಾರಿ ಆರೋಪ

ಒಂದೇ ವರ್ಷದಲ್ಲಿ ನಿರ್ಮಾಣವಾದ ಕಟ್ಟಡ

ಕೆ.ವಿ.ನಾಗರಾಜ್
Published 29 ಜುಲೈ 2025, 6:18 IST
Last Updated 29 ಜುಲೈ 2025, 6:18 IST
ನರಸಿಂಹರಾಜಪುರದಲ್ಲಿ ಮಿನಿವಿಧಾನ ಸೌಧ ಕಟ್ಟಡದ ಒಂದು ನೋಟ
ನರಸಿಂಹರಾಜಪುರದಲ್ಲಿ ಮಿನಿವಿಧಾನ ಸೌಧ ಕಟ್ಟಡದ ಒಂದು ನೋಟ   

ನರಸಿಂಹರಾಜಪುರ: ತಾಲ್ಲೂಕಿನ ಮಿನಿ ವಿಧಾನಸೌಧ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಜತೆಗೆ ಮಳೆ ನೀರು ಸೋರುತ್ತಿರುವುದು ಸಾರ್ವಜನಿಕರಲ್ಲಿ ಹಾಗೂ ಇಲಾಖೆ ನೌಕರರಲ್ಲಿ ಆತಂಕವನ್ನುಂಟು ಮಾಡಿದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದೀಪ್ತಿ ಪ್ರೌಢಶಾಲೆಯ ಬಳಿ ಮೀಸಲಿಟ್ಟಿದ್ದ ನಿವೇಶನದಲ್ಲಿ ₹2.50 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕಚೇರಿಯನ್ನು ನಿರ್ಮಿಸಿತ್ತು. 2009ರ ಜನವರಿ 13ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2010ರ ಜನವರಿ 20ರಂದು ಜಿಲ್ಲಾಧಿಕಾರಿ ಆರ್.ನಾರಾಯಣಸ್ವಾಮಿ ಕಟ್ಟಡ ಉದ್ಘಾಟಿಸಿದ್ದರು.

ಪ್ರಸ್ತುತ ಇಲ್ಲಿ ಕಂದಾಯ, ಖಜಾನೆ, ಅಬಕಾರಿ, ನೋಂದಣಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಕಟ್ಟಡವನ್ನು ಸಂಪೂರ್ಣ ನಿರ್ಮಿಸದೆ ಉದ್ಘಾಟನೆ ಮಾಡಿದ ಪರಿಣಾಮ ಚಾವಣಿಯ ಕಾಮಗಾರಿ ಕೈಗೊಳ್ಳಲಾಗಿಲ್ಲ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ಕಟ್ಟಡದ ಒಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.

ADVERTISEMENT

ಮಳೆ ಬಂದಾಗ ಮೆಟ್ಟಿಲು, ವರಾಂಡದಲ್ಲಿ ನೀರು ನಿಲ್ಲುತ್ತಿದೆ. ಜತೆಗೆ ಹಲವು ಭಾಗಗಳಲ್ಲಿ ಗೋಡೆಯ ಮೇಲೆ ನೀರು ಸೋರುತ್ತಿದೆ. ಕಟ್ಟಡ ಉದ್ಘಾಟನೆಗೊಂಡ ಕೆಲವೇ ವರ್ಷಗಳಲ್ಲಿ ಮುಂಭಾಗದ ಗೋಡೆಗಳು ತಳಪಾಯದಿಂದಲೇ ಭಾರಿ ಪ್ರಮಾಣದಲ್ಲಿ ಬಿರುಕುಬಿಟ್ಟಿದ್ದು, ಅದನ್ನು ಹಲವು ಬಾರಿ ಸಿಮೆಂಟ್‌ನಿಂದ ತೆಪೆಹಚ್ಚುವ ಕೆಲಸವನ್ನು ಮಾಡಿ ಕಳಪೆ ಕಾಮಗಾರಿ ಮುಚ್ಚಿ ಹಾಕುವ ಹಾಗೂ ಗುತ್ತಿಗೆದಾರರನ್ನು ರಕ್ಷಿಸುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮಾಡಿತ್ತು. ಆದರೆ, ಪ್ರಸ್ತುತ ಅದೇ ರೀತಿಯ ಬಿರುಕುಗಳು ಮತ್ತೆ ಉಂಟಾಗಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಟ್ಟಡ ನಿರ್ಮಾಣ ಮಾಡುವಾಗ ತಳಪಾಯದಿಂದ ಕಲ್ಲಿನ ಗೋಡೆ ನಿರ್ಮಿಸಿಲ್ಲ. ಬದಲಾಗಿ ಪ್ರತ್ಯೇಕವಾಗಿ ಗೋಡೆ ನಿರ್ಮಿಸಲಾಗಿದೆ. ಇದರಿಂದ ಗೋಡೆಗಳು ಬಿರುಕು ಬಿಟ್ಟಿವೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಟ್ಟಡದ ನೆಲಮಟ್ಟದ ಅಂತಸ್ತಿನ ಕಾಮಗಾರಿ ಕಳಪೆಯಾಗಿದ್ದು, ಮೇಲಂತಸ್ತಿನ ಕಾಮಗಾರಿ ಕೈಗೊಂಡು ಅರ್ಧಕ್ಕೆ ಕೈಬಿಟ್ಟಿರುವುದರಿಂದ ಹೊರಗಿನಿಂದ ಈ ಕಟ್ಟಡ ದಾಳಿಕೋರರ ದಾಳಿಗೊಳಗಾದಂತೆ ಬಾಸವಾಗುತ್ತಿದೆ.

ಮಿನಿ ವಿಧಾನಸೌಧ ಕಟ್ಟಡ ಸೋರುತ್ತಿರುವುದರಿಂದ ಹಾಗೂ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಅದರೊಳಗೆ ಹೋಗಲು ಭಯವಾಗುತ್ತದೆ. ಇಲ್ಲಿ ಸ್ವಚ್ಛತೆಯಿಲ್ಲವಾಗಿದೆ ಇದನ್ನು ದುರಸ್ತಿ ಪಡಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಮುತ್ತಿನಕೊಪ್ಪ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸಿ.ಎಲ್.ಮನೋಹರ್ ತಿಳಿಸಿದರು.

ಮಿನಿ ವಿಧಾನಸೌಧ ಕಟ್ಟಡ ಸೋರುತ್ತಿದ್ದು, ದುರಸ್ತಿ ಪಡಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್ ತನುಜಾ ಟಿ.ಸವದತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ನರಸಿಂಹರಾಜಪುರದಲ್ಲಿ ಮಿನಿವಿಧಾನ ಸೌಧ ಕಟ್ಟಡದ ಒಳ ನೋಟ
ನರಸಿಂಹರಾಜಪುರದ ಮಿನಿವಿಧಾನ ಸೌಧದಲ್ಲಿ ಮಳೆ ನೀರು ನಿಂತಿರುವುದು
ಮಿನಿ ವಿಧಾನ ಸೌಧ ಕಟ್ಟಡ ಹೊರ ಭಾಗದ ಕೀಟಕಿಯ ಸಮೀಪ ಗೋಡೆ ಸೀಳು ಬಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.