ನರಸಿಂಹರಾಜಪುರ: ಬಾಳೆ ಗ್ರಾ.ಪಂ. ವ್ಯಾಪ್ತಿಯ ಸಿರಗಳಲೆ ಗ್ರಾಮದ ಕಾರಳ್ಳಿಯ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ, ರಸ್ತೆಯ ಮಧ್ಯೆ ಬಾಳೆ ಗಿಡ ನೆಟ್ಟು ಬುಧವಾರ ಪ್ರತಿಭಟನೆ ನಡೆಸಿದರು.
ಸಿರಗಳಲೆ ಗ್ರಾಮದ ಕಾರಳ್ಳಿ ಪಟ್ಟಣದಿಂದ 2 ಕಿ.ಮೀ. ದೂರ ಮಾತ್ರ ಇದೆ. ಕಾರಳ್ಳಿಯಲ್ಲಿ ಸಣ್ಣ ರೈತರು, ಕೂಲಿ ಕಾರ್ಮಿಕರು ಸೇರಿದಂತೆ 100ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಜನರು ಕೆರೆಯ ಏರಿಯ ದಾಟಿ ಬೆಟಗೇರಿ ಮೂಲಕ ಪಟ್ಟಣಕ್ಕೆ ಹೋಗಬೇಕಾಗಿದೆ. ಆದರೆ, ಆ ಕೆರೆ ಏರಿಯ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಆಟೊ, ಕಾರು, ಆಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಬರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾ.ಪಂ. ಮಾಜಿ ಸದಸ್ಯೆ ಭಾಗ್ಯ ಮಾತನಾಡಿ, ‘80 ವರ್ಷಗಳಿಂದ ಕಾರಳ್ಳಿಯಲ್ಲಿ ನೂರಾರು ಕುಟುಂಬದವರು ವಾಸ ಮಾಡುತ್ತಿದ್ದಾರೆ. ಆದರೆ, ರಸ್ತೆ ದುರಸ್ತಿ ಮಾಡಿಸಿ ಕೊಡುತ್ತಿಲ್ಲ. 15 ವರ್ಷದ ಹಿಂದೆ ಒಮ್ಮೆ ಜಲ್ಲಿ ಹಾಕಲಾಗಿತ್ತು, ಅದು ಸಂಪೂರ್ಣವಾಗಿ ಕಿತ್ತು ಹೋಗಿದೆ. ರಸ್ತೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಮುಂದಿನ ದಿನಗಳಲ್ಲಿ ಕೆರೆ ಏರಿಯ ರಸ್ತೆ ದುರಸ್ತಿ ಮಾಡದಿದ್ದರೆ, ಚುನಾವಣಾ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡ ಸುರೇಶ್ ಮಾತನಾಡಿ, ಚುನಾವಣೆ ಬಂದಾಗ ಮತ ಕೇಳಲು ಎಲ್ಲರೂ ಬರುತ್ತಾರೆ. ಚುನಾವಣೆ ಮುಗಿದ ನಂತರ ಈ ಕಡೆ ತಲೆ ಹಾಕುವುದಿಲ್ಲ. ನಮ್ಮೂರಿಗೆ ಮಳೆಗಾಲದಲ್ಲಿ ಬರಲು ಅನುಕೂಲವಾಗುವಂತೆ ರಸ್ತೆ ದುರಸ್ತಿ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಕುಮಾರ, ಮಂಜು, ಸೈಪುಲ್ಲ, ಗೌರಮ್ಮ, ಶಿಲ್ಪ, ಸಲೀಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.