ADVERTISEMENT

‘ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆಯ ಅರಿವು ಅಗತ್ಯ’

ಪ್ರಥಮ ಚಿಕಿತ್ಸೆ ಅರಿವು, ಅಗ್ನಿ ಅವಘಡ ನಿಯಂತ್ರಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 4:49 IST
Last Updated 12 ಅಕ್ಟೋಬರ್ 2025, 4:49 IST
ನರಸಿಂಹರಾಜಪುರದ ಜೀವನ್ ಜ್ಯೋತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರಥಮ ಚಿಕಿತ್ಸೆ ಅರಿವು ಹಾಗೂ ಅಗ್ನಿ ಅವಘಡ ನಿಯಂತ್ರಣ ಕಾರ್ಯಕ್ರಮದಲ್ಲಿ ಡಾ. ವಿ.ವಿನಯ್, ಎಂ.ಕೆ. ರಾಘವೇಂದ್ರ, ಕೆ.ಟಿ.ಎಲ್ದೊ ಅವರನ್ನು ಸನ್ಮಾನಿಸಲಾಯಿತು
ನರಸಿಂಹರಾಜಪುರದ ಜೀವನ್ ಜ್ಯೋತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರಥಮ ಚಿಕಿತ್ಸೆ ಅರಿವು ಹಾಗೂ ಅಗ್ನಿ ಅವಘಡ ನಿಯಂತ್ರಣ ಕಾರ್ಯಕ್ರಮದಲ್ಲಿ ಡಾ. ವಿ.ವಿನಯ್, ಎಂ.ಕೆ. ರಾಘವೇಂದ್ರ, ಕೆ.ಟಿ.ಎಲ್ದೊ ಅವರನ್ನು ಸನ್ಮಾನಿಸಲಾಯಿತು   

ನರಸಿಂಹರಾಜಪುರ: ಪ್ರಥಮ ಚಿಕಿತ್ಸೆಯ ಕುರಿತು ಪ್ರತಿಯೊಬ್ಬರೂ ಅರಿವು ಹೊಂದಿರಬೇಕು ಎಂದು ಜೀವನ್ ಜ್ಯೋತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಫಾ. ಬೆನ್ನಿ ಮ್ಯಾಥ್ಯೂ ಅಭಿಪ್ರಾಯಪಟ್ಟರು.

ಇಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಜೀವನ್ ಜ್ಯೋತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ಪ್ರಥಮ ಚಿಕಿತ್ಸೆಯ ಅರಿವು ಹಾಗೂ ಅಗ್ನಿ ಅವಘಡ ನಿಯಂತ್ರಣ ಅರಿವು ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಸಮಯದಲ್ಲಿ ಅಪಘಾತ ಅಥವಾ ಅವಘಡಗಳು ಸಂಭವಿಸುವ ಸಾಧ್ಯತೆಯಿರುವುದರಿಂದ, ಆಪತ್‌ಕಾಲದಲ್ಲಿ ಸಹಾಯವಾಗುವ ಪ್ರಥಮ ಚಿಕಿತ್ಸೆ ಮತ್ತು ಅಗ್ನಿ ನಿಯಂತ್ರಣ ಕ್ರಮಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದುವುದು ಅವಶ್ಯಕ ಎಂದರು.

ADVERTISEMENT

ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಮಾತನಾಡಿ, ‘ಯಾವುದೇ ಅಪಘಾತ ಅಥವಾ ಅವಘಡ ಸಂಭವಿಸಿದಾಗ ಸ್ಪಂದಿಸಿ ಚಿಕಿತ್ಸೆ ನೀಡುವುದು ಪ್ರಥಮ ಚಿಕಿತ್ಸೆಯಾಗಿದೆ. ನಾಯಿ ಅಥವಾ ಇತರೆ ಪ್ರಾಣಿ ಕಚ್ಚಿದರೆ ಗಾಯವನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು, ಯಾವುದೇ ಔಷಧಿ ಬಳಸದೆಯೇ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದು ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು. ಜೊತೆಗೆ, ಬಿದ್ದು ಗಾಯವಾದಾಗ, ಮೂಳೆ ಮುರಿದಾಗ, ಹಾವು ಕಚ್ಚಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಅಗ್ನಿಶಾಮಕ ಇಲಾಖೆಯ ಅಗ್ನಿ ಪ್ರಮುಖ ಸಂತೋಷ್ ಕುಮಾರ್ ಮಾತನಾಡಿ, ‘ಪೆಟ್ರೋಲಿಯಂ ತೈಲಗಳು, ಬ್ಯಾಟರಿ ಸ್ಫೋಟಗಳು, ಅಡುಗೆ ಅನಿಲ ಸೋರಿಕೆ, ರಾಸಾಯನಿಕ ಮಿಶ್ರಣಗಳು ಹಾಗೂ ವಿದ್ಯುತ್ ಅವಘಡದಿಂದ ಅಗ್ನಿ ಅನಾಹುತಗಳು ಉಂಟಾಗುತ್ತವೆ. ಇವುಗಳನ್ನು ನಿಯಂತ್ರಿಸಲು ಮರಳು, ಕಾರ್ಬನ್ ಡೈಆಕ್ಸೈಡ್ ಮಿಶ್ರಣ ಹೊಂದಿರುವ ಅಗ್ನಿಶಾಮಮ ಸಿಲಿಂಡರ್, ನೀರು ಹಾಗೂ ನೊರೆಯ ಅವಶ್ಯವಾಗಿ ಬೇಕಾಗಿರುತ್ತದೆ’ ಎಂದು ತಿಳಿಸಿದರು. ಅಗ್ನಿ ಅವಘಡ ಸಂಭವಿಸಿದಾಗ ಅದನ್ನು ನಂದಿಸುವ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಜೀವನ್ ಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಟಿ.ಎಲ್ದೊ, ಜೇಸಿ ಸಂಸ್ಥೆಯ ಕಾಂತರಾಜ್, ಮನು ಅಬ್ರಹಾಂ ಮಾತನಾಡಿದರು.

ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ರಮೇಶ್, ಸಿಬ್ಬಂದಿ ಬಸವರಾಜ್ ಮೇಟಿ, ಶಾಲೆಯ ಪ್ರಾಂಶುಪಾಲ ಪೀಟರ್ ಬಾಬು, ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್, ಜೇಸಿ ಸಂಸ್ಥೆಯ ಜೋಯಿ, ಪವನ್ ಕರ್, ಮಿಥುನ್ ಗೌಡ, ನವೀನ್, ಸುಹಾಸ್, ಆದರ್ಶ್, ರಚಿತ್, ಲಿಖಿತ್ ಇದ್ದರು. ಸೆಲ್ಯೂಟ್ ಟು ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಡಾ. ವಿ.ವಿನಯ್, ಅಗ್ನಿ ಪ್ರಮುಖ ಎಂ.ಕೆ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.