
ಮಡಬೂರು (ನರಸಿಂಹರಾಜಪುರ): ತಾಲ್ಲೂಕಿನ ಮಡಬೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅಡಿಕೆ ಗಿಡಗಳನ್ನು ಧರೆಗುರುಳಿಸಿ ನಾಶ ಮಾಡಿವೆ.
ಮಡಬೂರು ಗ್ರಾಮದ ನಿವಾಸಿ ವನಮಾಲಮ್ಮ ಅವರ ಅಡಿಕೆ ತೋಟಕ್ಕೆ ಮಂಗಳವಾರ ರಾತ್ರಿ 6ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡಿ, 3ರಿಂದ 4 ವರ್ಷದ ಸುಮಾರು 500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಧರೆಗುರುಳಿಸಿವೆ.
ಮಡಬೂರು ಗ್ರಾಮದ ವ್ಯಾಪ್ತಿಗೆ, ಆರಂಬಳ್ಳಿ ಮೀಸಲು ಅರಣ್ಯ ವ್ಯಾಪ್ತಿಗೆ ಭದ್ರಾ ವನ್ಯಜೀವಿ ವಿಭಾಗದಿಂದ ಭದ್ರಾ ಹಿನ್ನೀರು ದಾಟಿ ಮಂಗಳವಾರ ರಾತ್ರಿ ಐದಾರು ಆನೆಗಳು ಬಂದಿದ್ದವು. ಇಂದು ಮರಿ ಆನೆಗಳು ಸೇರಿ ಒಟ್ಟು 16 ಕಾಡಾನೆಗಳು ಬಂದಿದ್ದು, ಅರಣ್ಯ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ತಂಡದ ಸಹಯೋಗದಲ್ಲಿ ಅವುಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಮಾಡಲಾಗಿದೆ. ಅಡಿಕೆ ಗಿಡ ನಾಶ ಮಾಡಿದ ತೋಟಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ ಎಂದು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕಳೆದ ಹಲವು ದಿನಗಳಿಂದ ಕಡಿಮೆಯಾಗಿದ್ದ ಕಾಡಾನೆಗಳ ಹಾವಳಿ ಭದ್ರಾಹಿನ್ನೀರು ಕಡಿಮೆಯಾಗುತ್ತಿದ್ದಂತೆ ಹೆಚ್ಚಾಗಿದ್ದು, ಭದ್ರಾ ಹಿನ್ನೀರು ದಾಟಿ ಗ್ರಾಮಗಳತ್ತ ಕಾಡಾನೆಗಳು ದಾಂಗುಡಿ ಇಡುತ್ತಿರುವುದು ರೈತರಲ್ಲಿ ಮತ್ತು ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಾಡಾನೆಗಳನ್ನು ಅಭಯಾರಣ್ಯಕ್ಕೆ ಓಡಿಸುವ ಕೆಲಸ ಅರಣ್ಯ ಇಲಾಖೆಯವರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.