ಗುಳ್ಳದಮನೆ (ಎನ್.ಆರ್.ಪುರ): ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳದಮನೆ ಗ್ರಾಮದಲ್ಲಿ ಮುಚ್ಚುವ ಹಂತಕ್ಕೆ ತಲುಪಿದ್ದ ಸರ್ಕಾರಿ ಶಾಲೆಗೆ ಕಾಯಕಲ್ಪ ಕಲ್ಪಿಸಿದ ಶಿಕ್ಷಕಿಯ ಮಾದರಿ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿಕ್ಷಕಿ ಶಿಲ್ಪಕುಮಾರಿ ವರ್ಗಾವಣೆಯಾಗಿ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಂದಾಗ ಶಾಲೆಯಲ್ಲಿ ಕೇವಲ ಮೂವರು ವಿದ್ಯಾರ್ಥಿಗಳಿದ್ದರು. ಇನ್ನೊಂದೆಡೆ ಕಟ್ಟಡದ ಚಾವಣಿ ಸಂಪೂರ್ಣ ಶಿಥಿಲಗೊಂಡು, ಕೊಠಡಿಯೊಳಗೆ ಕೂರದ ಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಶಾಲಾ ಕಟ್ಟಡಕ್ಕೆ ಕಾಯಕಲ್ಪ ಕಲ್ಪಿಸಲು ನಿರ್ಧರಿಸಿದ ಶಿಲ್ಪಕುಮಾರಿ, ಹಿರಿಯ ವಿದ್ಯಾರ್ಥಿಗಳ ಸಂಘ ರಚಿಸಿದರು.
ಶಾಲಾಭಿವೃದ್ಧಿ ಸಮಿತಿ, ಗ್ರಾಮದ ಮುಖಂಡರು, ದಾನಿಗಳನ್ನು ಸಂಪರ್ಕಿಸಿದರು. ಇದರ ಫಲವಾಗಿ ತಾಲ್ಲೂಕು ಪಂಚಾಯಿತಿಯಿಂದ ಕಟ್ಟಡ ದುರಸ್ತಿಗೆ ₹1 ಲಕ್ಷ, ದಾನಿಗಳಿಂದ ₹1.20 ಲಕ್ಷ ದೊರೆಯಿತು. ಇದರ ಜೊತೆಗೆ ಶಾಲೆಗೆ ₹3.30 ಲಕ್ಷ ಮೊತ್ತದ ಬೇರೆ ಬೇರೆ ಪರಿಕರ ಸಂಗ್ರಹವಾಯಿತು. ಚಾವಣಿ, ನೆಲಹಾಸು, ಸುಣ್ಣ ಬಣ್ಣ, ಗಾರೆ ಕೆಲಸ, ವಿದ್ಯುತ್ ಸಂಪರ್ಕ, ಉದ್ಯಾನ, ಕ್ರೀಡಾಂಗಣಕ್ಕೆ ಕುಟುಂಬದ ಸಹಕಾರದಿಂದ ಸ್ವಂತ ₹4 ಲಕ್ಷ ವೆಚ್ಚ ಮಾಡಿದ್ದಾರೆ.
ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ₹1 ಲಕ್ಷ ಮುಂಗಡ ನೀಡಿದ್ದಾರೆ. ಆದರೆ, ಈ ಹಣವನ್ನು ಬೇರೆ ಅನುದಾನದಲ್ಲಿ ಭರಿಸುವ ಭರವಸೆಯನ್ನು ಶಾಸಕ ಟಿ.ಡಿ. ರಾಜೇಗೌಡ ನೀಡಿದ್ದಾರೆ. ಭದ್ರಾ ಟೆಲಿಲಿಂಕ್ಸ್‌ನಿಂದ ಕೊಠಡಿಗೆ ₹50 ಸಾವಿರ ವೆಚ್ಚದಲ್ಲಿ ನೆಲಹಾಸು ಹಾಕಿಸಿ ಕೊಟ್ಟಿದ್ದಾರೆ. ನಾಗಚಂದ್ರ ಪ್ರತಿಷ್ಠಾನದ ಕಣಿವೆ ವಿನಯ್ ಅವರು, ಸ್ಮಾರ್ಟ್ ಕ್ಲಾಸ್‌ನ್ನು ದಾನವಾಗಿ ನೀಡಿದ್ದಾರೆ. ದಾನಿ ಗದ್ದೆಮನೆ ವಿಶ್ವನಾಥ್ ಅವರು, ಶಾಲೆಯ ಎರಡು ಕೊಠಡಿಗೆ ನೆಲಹಾಸು ಹಾಕಲು ₹1 ಲಕ್ಷ ನೆರವು ನೀಡಿದ್ದಾರೆ. ಗ್ರಾ.ಪಂಯಿಂದ ₹30 ಸಾವಿರ ಅನುದಾನ ಬಂದಿದೆ. ಸ್ಪೋರ್ಟ್ ಕ್ಲಬ್ ವತಿಯಿಂದ ನಲಿ–ಕಲಿಗೆ ಪಿಠೋಪಕರಣ ನೀಡಲಾಗಿದೆ. ಎಲ್ಲರ ಸಹಕಾರ ಪಡೆದ ಶಿಕ್ಷಕಿ ಶಿಥಿಲಾವಸ್ಥೆಗೆ ತಲುಪಿದ್ದ ಶಾಲಾ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಪ್ರಸ್ತುತ ಒಬ್ಬರು ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಬ್ಯೂಟಿಷಿಯನ್ ಆಗಿರುವ ಮೇಘನಾ ಸುಧಾ ಅವರು ಈ ಶಾಲೆಗೆ ಸೇರುವ ಪ್ರತಿ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ₹1 ಸಾವಿರ ನಿಶ್ಚಿತ ಠೇವಣಿ ಇರಿಸಿ, ಸರ್ಕಾರಿ ಶಾಲೆ ಉಳಿಸುವ ಶಿಕ್ಷಕಿಯ ಕಾರ್ಯಕ್ಕೆ ಆಸರೆಯಾಗಿದ್ದಾರೆ. ಶಿಕ್ಷಕಿಯ ಸತತ ಪ್ರಯತ್ನದಿಂದ ಶಾಲೆಯ ಮಕ್ಕಳ ದಾಖಲಾತಿ ಸಂಖ್ಯೆ 14ಕ್ಕೆ ಹೆಚ್ಚಿದೆ.
ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಎಲ್ಲರ ಸಹಕಾರ ಪಡೆದು ನಮ್ಮೂರ ಹೆಮ್ಮೆಯ ಶಾಲೆಯಾಗಿ ಅಭಿವೃದ್ಧಿಪಡಿಸಿದ ಶ್ರೇಯಸ್ಸು ಮುಖ್ಯಶಿಕ್ಷಕಿಗೆ ಸಲ್ಲುತ್ತದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ತಿಳಿಸಿದರು.
ಈ ಶಾಲೆಯ ನವೀಕೃತ ಕಟ್ಟಡದ ಉದ್ಘಾಟನೆ ಜೂನ್ 16ರಂದು ನಡೆಯಲಿದೆ.
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಿರಿಯ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಸಹಕಾರ ಪಡೆದು ಎಲ್ಲರೊಂದಿಗೆ ಪ್ರತಿ ಮನೆ ಮನೆಗೆ ಭೇಟಿ ಮಾಡಿ ಮನವೊಲಿಸಿ ಮಕ್ಕಳನ್ನು ಕರೆದುಕೊಂಡು ಬರಲಾಗಿದೆ.– ಶಿಲ್ಪಕುಮಾರಿ ಮುಖ್ಯ ಶಿಕ್ಷಕಿ ಗುಳ್ಳದಮನೆ ಸರ್ಕಾರಿ ಶಾಲೆ
ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಶಿಕ್ಷಕಿ ಶಿಲ್ಪಕುಮಾರಿಯ ಪ್ರಯತ್ನದಿಂದ ಶಾಲೆ ಹೊಸರೂಪ ಪಡೆದಿದ್ದು ಉತ್ತಮ ಶಿಕ್ಷಣ ಲಭಿಸಿದೆ. ಶಾಲೆ ಉಳಿದಿರುವುದರಿಂದ ನಮ್ಮ ತಂದೆ ಶಾಲೆಗೆ ಜಾಗ ದಾನ ನೀಡಿದ್ದು ಸಾರ್ಥಕವಾಗಿದೆ.– ಜಿ.ಎಂ.ಪ್ರಕಾಶ್ ನಿರ್ದೇಶಕ ಹಿರಿಯ ವಿದ್ಯಾರ್ಥಿ ಸಂಘ
ನಾವು ಓದಿದ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದು ಬೇಸರವಾಗಿತ್ತು. ಹಿರಿಯ ವಿದ್ಯಾರ್ಥಿಗಳು ಗ್ರಾಮಸ್ಥರ ಸಹಕಾರದಿಂದ ಶಾಲೆ ಉಳಿಸಿದ್ದೇವೆ.– ಎಸ್.ಎಸ್.ಸಂತೋಷ್ ಕುಮಾರ್ ಅಧ್ಯಕ್ಷ ಹಿರಿಯ ವಿದ್ಯಾರ್ಥಿ ಸಂಘ
3 ವರ್ಷದಿಂದ ಶಾಲೆಯಲ್ಲಿ ಶಿಕ್ಷಣ ದೊರೆಯದೆ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿತ್ತು. ಪ್ರಸ್ತುತ ಶಿಕ್ಷಕರು ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ.– ವಿಜು ಎಸ್.ಡಿ.ಎಂ.ಸಿ ಅಧ್ಯಕ್ಷ ಗುಳ್ಳದಮನೆ ಸರ್ಕಾರಿ ಶಾಲೆ
ಇತಿಹಾಸ
ಗ್ರಾಮದ ಮುಖಂಡ ಜಿ.ಆರ್.ಮಂಜಪ್ಪ ಗೌಡರು ದಾನವಾಗಿ ನೀಡಿದ ಜಾಗದಲ್ಲಿ 1968ರ ಮೇ 25ರಂದು ಗುಡಿಸಲಿನಲ್ಲಿ ಗುಳ್ಳದಮನೆ ಸರ್ಕಾರಿ ಶಾಲೆ ಆರಂಭವಾಗಿತ್ತು. 1ರಿಂದ 4ನೇ ತರಗತಿಯ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಬಳಿಕ ಶಿಕ್ಷಣ ಇಲಾಖೆಯಿಂದ ಕಟ್ಟಡ ನಿರ್ಮಿಸಲಾಯಿತು. ವಿಠಲ ಗ್ರಾಮಕ್ಕೆ ಓಡಾಡಲು ಕಷ್ಟವಾಗುತ್ತದೆ ಎಂದು 1976–77ರಲ್ಲಿ ಗುಳ್ಳದಮನೆಗೆ ವರ್ಗಾಯಿಸಲಾಯಿತು.
‘ಸದರಿ ಶಾಲೆಗೆ ಮಕ್ಕಳನ್ನು ಸೇರಿಸಲಾಗಿದೆ’
ಈ ಹಿಂದೆ ಶಾಲೆಯಲ್ಲಿ 1ರಿಂದ 5ನೇ ತರಗತಿ ಪಾಠ ಮಾಡಲು ಒಬ್ಬರೇ ಶಿಕ್ಷಕರಿದ್ದರು. ಮಕ್ಕಳ ಓದಿನಲ್ಲಿ ಹಿನ್ನಡೆಯಾಗಿತ್ತು. ಮೂಲ ಸೌಕರ್ಯವು ಇರಲಿಲ್ಲ. ಹಾಗಾಗಿ ಇಲ್ಲಿದ್ದ 8 ಮಕ್ಕಳು ಪಟ್ಟಣದ ಕೆಪಿಎಸ್‌ಸಿ ಶಾಲೆಗೆ ದಾಖಲಾಗಿದ್ದರು. ಶಿಕ್ಷಕಿ ಶಿಲ್ಪಕುಮಾರಿ ಬಂದ ಮೇಲೆ ಶಾಲೆ ಅಭಿವೃದ್ಧಿಪಡಿಸಿ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಪುನಃ ಮಕ್ಕಳನ್ನು ಸದರಿ ಶಾಲೆಗೆ ಸೇರಿಸಲಾಗಿದೆ ಎಂದು ಪೋಷಕ ನಾಗೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.