ADVERTISEMENT

ಬಿ.ಎಲ್‌.ರವಿಕುಮಾರ್‌ಗೆ ವಾರ್ಷಿಕ ರಂಗ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 16:13 IST
Last Updated 4 ಜನವರಿ 2020, 16:13 IST
ಬಿ.ಎಲ್‌.ರವಿಕುಮಾರ್‌
ಬಿ.ಎಲ್‌.ರವಿಕುಮಾರ್‌   

ಚಿಕ್ಕಮಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2019–20ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ವಾರ್ಷಿಕ ರಂಗಪ್ರಶಸ್ತಿ 25 ಮಂದಿಗೆಸಂದಿದ್ದು, ಜಿಲ್ಲೆಯ ಶೃಂಗೇರಿಯ ವಿದ್ಯಾರಣ್ಯಪುರದ ಬಿ.ಎಲ್‌.ರವಿಕುಮಾರ್‌ ಅವರು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ವಾರ್ಷಿಕ ರಂಗಪ್ರಶಸ್ತಿಯು ₹ 25 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.

ರವಿಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವಾಗಲೇ ಪ್ರಶಸ್ತಿ ಸಂದಿರುವುದ ಬಹಳ ಖುಷಿ ತಂದಿದೆ.

ADVERTISEMENT

ಕಲಾವಿದರಿಗೆ ಪುರಸ್ಕಾರಗಳು ಪ್ರೇರಣೆ ‘ಟಾನಿಕ್‌’ ಇದ್ದಂತೆ. ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಇನ್ನು ಹೆಚ್ಚು ಕೆಲಸ ಮಾಡಲು ಹುಮ್ಮಸ್ಸು ಹೆಚ್ಚಿಸಿದೆ’ ಎಂದು ಸಂತಸ ಹಂಚಿಕೊಂಡರು.

ರವಿಕುಮಾರ್‌ ಅವರು ಬಿ.ಎಲ್‌.ಲಕ್ಷ್ಮಿನಾರಾಯಣಯ್ಯ, ವಿಶಾಲಾಕ್ಷ್ಮಮ್ಮ ದಂಪತಿ ಪುತ್ರ. ಬಿ.ಎಸ್ಸಿ, ಬಿ.ಇಡಿ ಪದವೀಧರರಾಗಿರುವ ರವಿಕುಮಾರ್‌ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೈಸ್ಕೂಲು ದಿನಗಳಿಂದಲೇ ನಾಟಕ, ಚರ್ಚಾಸ್ಪರ್ಧೆ, ಏಕಪಾತ್ರಾಭಿಯ ಗೀಳು ಮೈಗೂಡಿತ್ತು. ಕಾಲೇಜು ದಿನಗಳಲ್ಲಿ ಕಲಾವಿದರಾಗಿ ಬೆಳೆದರು.

ನಿರಂತರವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕಾಳಿಂಗ ನಾವುಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಂಗಮಿತ್ರರು ತಂಡಗಳ ಪ್ರಮುಖ ಕಲಾವಿದ.

‘ಕರ್ಣಭಾರ’, ‘ಕಲೆಯ ಕೊಲೆ’, ‘ಸುಳಿಯಲ್ಲಿ ಸಿಕ್ಕವರು’, ‘ಅರಮನೆ ಕಥಾಪ್ರಸಂಗ’, ‘ಹೀಗೊಂದು ಕತೆ’ ಸಹಿತ ಸುಮಾರು 70 ನಾಟಕಗಳಲ್ಲಿ ಈವರೆಗೆ ಅಭಿನಯಿಸಿದ್ದಾರೆ. ಚಂದನ ವಾಹಿನಿಯ ‘ಮಲೆನಾಡ ಮಡಿಲಿಂದ’ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.

2001ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.