ADVERTISEMENT

ಶಾಸಕಿ ನಯನಾ ಮೋಟಮ್ಮ ಹೇಳಿಕೆ ಸಂಚಲನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 17:10 IST
Last Updated 30 ಜುಲೈ 2025, 17:10 IST
ನಯನಾ ಮೋಟಮ್ಮ
ನಯನಾ ಮೋಟಮ್ಮ   

ಚಿಕ್ಕಮಗಳೂರು: ‘ಬಿಜೆಪಿಗೆ ಹೋಗ್ತಿನೊ, ಕಾಂಗ್ರೆಸ್ಸಿನಲ್ಲೇ ಉಳಿತಿನೊ.. ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ’ ಎಂಬ ಶಾಸಕಿ ನಯನಾ ಮೋಟಮ್ಮ ಹೇಳಿಕೆ ಜಾಲತಾಣಗಳಲ್ಲಿ ಸಾಕಷ್ಟು ಹಂಚಿಕೆ ಆಗಿದ್ದು, ಸಂಚಲನ ಮೂಡಿಸಿತು. 

ಮೂಡಿಗೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಭಾಗವಹಿಸಿದ್ದ ಶಾಸಕಿ ಈ ಮಾತು ಹೇಳಿದ್ದರು.

ಜೆಡಿಎಸ್‌ ಪಕ್ಷ ಟ್ವೀಟ್ (ಜನತಾ ದಳ ಸೆಕ್ಯೂಲರ್ ಖಾತೆ) ಮೂಲಕ ಕಾಂಗ್ರೆಸ್ ಕಾಲೆಳೆದಿದ್ದು, ‘ಸ್ವಪಕ್ಷದ ಶಾಸಕರಿಗೆ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ. ಅದಕ್ಕೆ ನಯನಾ ಮಾತುಗಳೇ ಸಾಕ್ಷಿ’ ಎಂದು ಟೀಕಿಸಿದೆ.

ADVERTISEMENT

‘ಕಾಂಗ್ರೆಸ್ ಮುಕ್ತ ಕರ್ನಾಟಕ 2028ರ ಚುನಾವಣೆಯಲ್ಲಿ ಮುನ್ನುಡಿ ಬರೆಯುವುದು ಗ್ಯಾರಂಟಿ. ಕಾಂಗ್ರೆಸ್‌ ಶಾಸಕರೇ, ಕಾರ್ಯಕರ್ತರೇ ಈಗಲೇ ಎಚ್ಚೆತ್ತು ಎನ್‌ಡಿಎ ಮೈತ್ರಿಕೂಟದ ಜತೆ ಕೈ ಜೋಡಿಸಿ’ ಎಂದಿದೆ.

ಮೂಡಿಗೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಮರಗುಂದ ಪ್ರಸನ್ನ ಸುದ್ದಿಗೋಷ್ಠಿ ನಡೆಸಿ, ‘ಶಾಸಕಿ ನಯನಾ ಮೋಟಮ್ಮ ಅವರ ಹೇಳಿಕೆ ಸೈದ್ಧಾಂತಿಕ ದಿವಾಳಿತನ ತೋರಿಸುತ್ತದೆ. ಶಾಸಕರ ನಡೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಮೋಟಮ್ಮ ಹೇಳಿಕೆ ಆಧರಿಸಿ ಕಾಂಗ್ರೆಸ್ ಕಾಲೆಲೆದು ಟ್ವೀಟ್ ಮಾಡಿರುವ ಜೆಡಿಎಸ್
ಟೀಕೆಗಳಿಗೆ ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿರುವ ನಯನಾ ಮೋಟಮ್ಮ

ಆಯ್ಕೆಗಳ ಬಗ್ಗೆ ಸ್ಪಷ್ಟತೆ ಇದೆ: ನಯನಾ

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ನಯನಾ ಮೋಟಮ್ಮ ‘ನಾನು ಹೇಗೆ ಎಂದು ಅರ್ಥ ಮಾಡಿಕೊಳ್ಳಲಾಗದ ಕೆಲವರ ಸ್ಥಿತಿ ಕಂಡು ನನಗೆ ಆಶ್ಚರ್ಯ ಆಗುತ್ತಿದೆ’ ಎಂದಿದ್ದಾರೆ. ‘ಕೇಸರಿ ಶಾಲು ಹಾಕಿದರೆ ಕೆಲ ಲಿಬರಲ್ಸ್‌ಗಳು ನನ್ನ ಉದ್ದೇಶ ಅಥವಾ ನಿಷ್ಠೆಯನ್ನೇ ವಿಚಿತ್ರವಾಗಿ ಪ್ರಶ್ನೆ ಮಾಡುತ್ತಾರೆ. ವಿಶೇಷ ಏನೆಂದರೆ ಇವರು ಯಾರೂ ನನಗೆ ಬೆಂಬಲ ನೀಡಲ್ಲ. ಈ ವಿಷಯಗಳ ಬಗ್ಗೆ ಬೇಸರ ಅಥವಾ ಗೊಂದಲ ನನಗಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.