ADVERTISEMENT

ಚಿಕ್ಕಮಗಳೂರು: ‘ಸುಭಾಷ್ ಚಂದ್ರಬೋಸ್ ಇದ್ದಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ’

ಜಿ.ಬಿ.ಹರೀಶ್ ಅವರ ಮಹಾಕಾಲ–2 ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 6:58 IST
Last Updated 1 ಡಿಸೆಂಬರ್ 2025, 6:58 IST
ಜಿ.ಬಿ.ಹರೀಶ ಅವರ ಮಹಾಕಾಲ-2 ಕಾದಂಬರಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಿಡುಗಡೆ ಮಾಡಿದರು
ಜಿ.ಬಿ.ಹರೀಶ ಅವರ ಮಹಾಕಾಲ-2 ಕಾದಂಬರಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಿಡುಗಡೆ ಮಾಡಿದರು   

ಚಿಕ್ಕಮಗಳೂರು: ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಜೀವಂತವಾಗಿ ಇದ್ದಿದ್ದರೆ ದೇಶ ವಿಭಜನೆಯೇ ಆಗುತ್ತಿರಲಿಲ್ಲ ಎಂದು ಕಾದಂಬರಿಕಾರ ಜಿ.ಬಿ.ಹರೀಶ್ ಅಭಿಪ್ರಾಯಪಟ್ಟರು.

ನಗರದ ಬಸವನಹಳ್ಳಿ ಶಂಕರಮಠದಲ್ಲಿ ನಾದ ಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆ, ನಿವೃತ್ತ ಸೈನಿಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಜಿ.ಬಿ.ಹರೀಶ್ ಅರ ಮಹಾಕಾಲ–2 ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸತ್ಯ ಯಾವತ್ತಿದ್ದರೂ ಅನಾವರಣ ಆಗಲೇಬೇಕು. ಸುಭಾಷ್‌ ಚಂದ್ರ ಬೋಸ್‌ರ ಕುರಿತಾದ ಅನೇಕ ಊಹಾಪೋಹಗಳಿಗೆ ಈ ಕೃತಿ ಉತ್ತರ ನೀಡುತ್ತದೆ. ಜಗತ್ತಿನ ಎಲ್ಲಿಯೂ ಮಹಿಳಾ ಸೈನ್ಯ ಇರಲಿಲ್ಲ. ಆ ಕಾಲದಲ್ಲೇ ಮಹಿಳಾ ಸೈನ್ಯ ಕಟ್ಟಿದ್ದವರು ಸುಭಾಷ್‌ ಚಂದ್ರ ಬೋಸ್‌. ಅವರು ಜೀವಂತವಾಗಿ ಇದ್ದಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಎಂಬ ಮಾತು ಸತಃ ಜಿನ್ನಾ ಅವರಿಂದಲೇ ಕೇಳಿ ಬಂದಿತ್ತು’ ಎಂದರು.

ADVERTISEMENT

‘ಬೋಸರಿಗೆ ಬ್ರಿಟಿಷರಿಗಿಂತ ಅಹಿಂಸಾವಾದಿ ನಾಯಕರಿಂದಲೇ ವಿರೋಧವಿತ್ತು. ಏಳು ವರ್ಷಗಳಿಂದ ಅವರ ಕುರಿತು ದೇಶ-ವಿದೇಶಗಳ ಅತ್ಯಮೂಲ್ಯ ದಾಖಲೆ ಸಂಗ್ರಹಿಸಿ ಅಧ್ಯಯನ ಮಾಡಿ ಕಾದಂಬರಿ ರೂಪದಲ್ಲಿ ಈ ಕೃತಿ ರಚಿಸಿದ್ದೇನೆ’ ಎಂದು ಹೇಳಿದರು.

ಸಾಹಿತಿ ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ‘ರಾಷ್ಟ್ರ ಧ್ವಜದ‌ಲ್ಲಿ ನೈಜ ಪರಿವರ್ತನೆ ತರುವ ನಾಯಕತ್ವದ ಗುಣ ನೇತಾಜಿ ಸುಭಾಷ್‌ ಚಂದ್ರ ಬೋಸ್‌ರ ಕನಸಾಗಿತ್ತು. ಅವರು ದೇಶಕ್ಕೆ ಬೇಕಾದ ರಕ್ಷಣಾತ್ಮಕ ಮನೋಭಾವವನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡಿದ್ದರು’ ಎಂದರು.

‘ಈ ದೇಶಕ್ಕೆ ಅಗತ್ಯವಾದ ರಕ್ಷಣಾ ತಂತ್ರದ ಅಗತ್ಯತೆಯ ಕಲ್ಪನೆ ಚಿಕ್ಕಂದಿನಿಂದಲೂ ನೇತಾಜಿ ಅವರಲ್ಲಿತ್ತು. ಸುಸಂಸ್ಕೃತ ಹಾಗೂ ಶ್ರೀಮಂತವಾದ ಕುಟುಂಬದಿಂದ ಬಂದ ಅವರು ಚಿಕ್ಕಂದಿನಿಂದಲೂ ಕ್ರಾಂತಿಕಾರಕ ವಿಚಾರ ಹೊಂದಿದ್ದರು. ಜಿ.ಬಿ.ಹರೀಶ್ ಅವರ ಕಾದಂಬರಿ ಈ ಬಗ್ಗೆ ಬೆಳಕು ಚೆಲ್ಲುತ್ತದೆ’ ಎಂದು ಹೇಳಿದರು.

ಕೃತಿ ಬಿಡುಗೆ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಐತಿಹಾಸಿಕವಾಗಿ ಸಿಗಬೇಕಿದ್ದ ನ್ಯಾಯ ಕೆಲವರಿಗೆ ಸಿಕ್ಕಿಲ್ಲ. ಅವರಲ್ಲಿ ಸುಭಾಷ್‌ ಚಂದ್ರ ಬೋಸ್‌ ಕೂಡ ಒಬ್ಬರು. ಇತ್ತೀಚೆಗೆ ಅವರ ವ್ಯಕ್ತಿತ್ವಕ್ಕೆ ನ್ಯಾಯ ದೊರೆಯುತ್ತಿದೆ. ಇಂಡಿಯಾ ಗೇಟ್‌ನಲ್ಲಿ ಅವರ ಪ್ರತಿಮೆ ಅನಾವರಣ ಮಾಡುವ ಮೂಲಕ ಅವರ ವ್ಯಕ್ತಿತ್ವ ಗುರುತಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದರು.

ನಾದ ಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆಯ ಅಧ್ಯಕ್ಷ ಸಿ.ಆರ್.ಪ್ರೇಮಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಖಜಾಂಚಿ ರೇಖಾ ಪ್ರೇಮಕುಮಾರ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ ಇದ್ದರು.

‘ಸತ್ಯ ಯಾವತ್ತಿದ್ದರೂ ಅನಾವರಣ ಆಗಲೇಬೇಕು’ ಕ್ರಾಂತಿಕಾರಕ ವಿಚಾರ ಹೊಂದಿದ್ದ ಸುಭಾಷ್‌ ಚಂದ್ರ ಬೋಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.