ನರಸಿಂಹರಾಜಪುರ: ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಬಾಳೆಕೊಪ್ಪ ಗ್ರಾಮದ ಬಾಗಿಲು ಸರ್ಕಾರಿ ಶಾಲೆಯ ಆವರಣದಲ್ಲಿ ಟೆಂಟ್‌ನಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗಕ್ಕೆ ವಸತಿ ಕಲ್ಪಿಸಲು ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪದಲ್ಲಿ ನಿವೇಶನ ಮಂಜೂರಾಗಿದೆ.
ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗುವಾನಿ ಸರ್ಕಲ್‌ನಲ್ಲಿ 15 ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ವಾಸವಾಗಿದ್ದ ಅಲೆಮಾರಿ ಜನಾಂಗದವರು ಮೂಢನಂಬಿಕೆಗೆ ಹೆದರಿ 2018ರ ಜುಲೈ 26ರಂದು ಎಲ್ಲವನ್ನೂ ಬಿಟ್ಟು ಗ್ರಾಮ ತೊರೆದಿದ್ದರು. ಈ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬೇರೆ, ಬೇರೆ ಊರಿಗೆ ಹೋಗಿದ್ದ ಅಲೆಮಾರಿ ಜನಾಂಗದವರನ್ನು ಬಳಿಕ ತಾಲ್ಲೂಕು ಆಡಳಿತ ಮನವೊಲಿಸಿ ಮತ್ತೆ ತಾಲ್ಲೂಕಿಗೆ ಕರೆದುಕೊಂಡು ಬರಲಾಗಿತ್ತು. ಇವರಿಗೆ ಕಾಯಂ ನಿವೇಶನ ಕಲ್ಪಿಸುವವರೆಗೆ ತಾಲ್ಲೂಕಿನ ಕಡಹಿನಬೈಲು ಗ್ರಾಮದ ವ್ಯಾಪ್ತಿಯಲ್ಲಿ ಬಾಗಿಲು ಮುಚ್ಚಿದ್ದ ಸರ್ಕಾರಿ ಶಾಲೆ ಆವರಣದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಅಲೆಮಾರಿ ಜನಾಂಗದವರು ಇಲ್ಲಿ ಟೆಂಟ್‌ಗಳನ್ನು ನಿರ್ಮಿಸಿ ಕೊಂಡು ವಾಸವಾಗಿದ್ದಾರೆ.
ಈ ನಡುವೆ ತಾಲ್ಲೂಕು ಹಾಗೂ ಜಿಲ್ಲಾಡಳಿತ ಇವರಿಗೆ ಕಾಯಂ ನಿವೇಶನ ನೀಡಲು ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 179ರ ಸರ್ಕಾರಿ ಜಾಗದಲ್ಲಿ 1ಎಕರೆ ಮೀಸಲಿಡಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಯಿತು. ಆದರೆ, ಈ ಪ್ರದೇಶದಲ್ಲಿ ಬೃಹತ್ ಗಾತ್ರದ ಮರಗಳಿವೆ ಎಂದು ಅರಣ್ಯ ಇಲಾಖೆ ತಗಾದೆ ತೆಗೆದಿದ್ದರಿಂದ ಈ ಪ್ರದೇಶವನ್ನು ಕೈಬಿಡಲಾಯಿತು.
ತಮಗೆ ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಅಲೆಮಾರಿ ಜನಾಂಗದವರು ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಅಲ್ಲದೆ, ಅರಣ್ಯ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ತಮಗೆ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ನಿವೇಶನ ನೀಡುವಂತೆ ಒತ್ತಾಯ ಮಾಡಿದ್ದರು.
ಬಳಿಕ ತಾಲ್ಲೂಕು ಆಡಳಿತ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದ ಸರ್ವೆ ನಂ. 108ರಲ್ಲಿ 1ಎಕರೆ ನಿವೇಶನವನ್ನು ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತು. ಅದರಂತೆ ಈ ನಿವೇಶನ ಮಂಜೂರಾಗಿದ್ದು, ಅಲೆಮಾರಿ ಜನಾಂಗಕ್ಕೆ ಆಶ್ರಯ ನಿವೇಶನ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.
‘ಅಲೆಮಾರಿ ಜನಾಂಗಕ್ಕೆ ಮಂಜೂರಾಗಿದ್ದ 1ಎಕರೆ ಜಾಗವನ್ನು ಅರಣ್ಯ ಇಲಾಖೆ ಹಸ್ತಾಂತರ ಮಾಡಿದೆ. ಇಲ್ಲಿ ಬಡಾವಣೆ ನಿರ್ಮಿಸಿ ಅಲೆಮಾರಿ ಜನಾಂಗಕ್ಕೆ ನಿವೇಶನ ಹಂಚಲು ಕ್ರಮಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ನಯನಾ ತಿಳಿಸಿದರು.
‘ಅರಳಿಕೊಪ್ಪ ಗ್ರಾಮದ ಸರ್ವೆ ನಂ 108ರಲ್ಲಿ ಅಲೆಮಾರಿ ಜನಾಂಗಕ್ಕೆ ಮಂಜೂರಾಗಿದ್ದ ಜಾಗದಲ್ಲಿದ್ದ ಮರ ಗಳನ್ನು ತೆರವುಗೊಳಿಸಿ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸ ಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಸಂತೋಷ್ ಸಾಗರ್ ತಿಳಿಸಿದರು.
‘ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ’
‘ತಾಲ್ಲೂಕಿನ ಬಾಳೆಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ವ್ಯಾಪ್ತಿಯಲ್ಲಿ ಟೆಂಟ್‌ಗಳಲ್ಲಿ ವಾಸಮಾಡುತ್ತಿರುವ ಅಲೆಮಾರಿ ಜನಾಂಗಕ್ಕೆ ಅರಳಿಕೊಪ್ಪ ಗ್ರಾಮದ 108 ಸರ್ವೆ ನಂ.ನಲ್ಲಿ 1 ಎಕರೆ ಜಾಗ ಮಂಜೂರಾಗಿದ್ದು, ಮರಗಳನ್ನು ತೆರವುಗೊಳಿಸಲಾಗಿದೆ. ಜನಾಂಗದವರನ್ನು ಇಲ್ಲಿ ವಾಸ ಮಾಡುವಂತೆ ಮನವೊಲಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಬಡಾವಣೆ ನಿರ್ಮಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಮನೆ ನಿರ್ಮಿಸಿಕೊಡಲಾಗುವುದು’ ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.