
ನರಸಿಂಹರಾಜಪುರ: ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ಪಠ್ಯ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಸಿಗುತ್ತದೆ ಎಂದು ಸೀತೂರು ಮಂಡಲ ಮಾಜಿ ಪ್ರಧಾನ ಎಸ್.ಡಿ.ವಿ. ಗೋಪಾಲರಾವ್ ಹೇಳಿದರು.
ಸೀತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು. ನಾವು ಮಾಡಿದ ಸೇವೆ ಜೀವನ ಪರ್ಯಂತ ಇರಲಿದೆ. ದೇಶ ಕಟ್ಟಬೇಕಾದರೆ ಯುವಜನರಿಂದ ಮಾತ್ರ ಸಾಧ್ಯವಾಗುತ್ತದೆ. ನಾನು ಬಾಲಕನಾಗಿದ್ದಾಗ ಸ್ವಾತಂತ್ರ್ಯ ಹೋರಾಟಗಾರರ ಜತೆ ಭಾಗವಹಿಸಿದ್ದೆ ಎಂದು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಧನಂಜಯ ಮಾತನಾಡಿ, ಎನ್.ಎಸ್.ಎಸ್. ಶಿಬಿರದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಗ್ರಾಮಸ್ಥರ ಅನುಭವದ ಶಿಕ್ಷಣ ಸಿಗಲಿದೆ. ಜೀವನ ಕೌಶಲ ಕಲಿಯಬಹುದು. ಗ್ರಾಮದ ಪರಿಸರ, ಜನರ ಒಡನಾಟ, 7 ದಿನಗಳ ಕಾಲ ನಡೆಯುವ ಘಟನೆಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಅನುಭವದ ಪಾಠ ದೊಡ್ಡ ಶಿಕ್ಷಣವಿದ್ದಂತೆ. ಶಿಬಿರಾರ್ಥಿಗಳು ಇಲ್ಲಿನ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಒಳ್ಳೆಯ ಹೆಸರು ಪಡೆಯಬೇಕು ಎಂದರು.
ಸೀತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಇ. ದಿವಾಕರ ಮಾತನಾಡಿ, ಎನ್.ಎಸ್.ಎಸ್ ಶಿಬಿರಕ್ಕೆ ಸೀತೂರು ಗ್ರಾಮ ಪಂಚಾಯಿತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹಂತ ಬಂದಿರುವುದು ವಿಷಾದಕರ. ಸರ್ಕಾರಿ ಶಾಲೆಯಲ್ಲಿ ಕಲಿತವರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಸೀತೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪ್ರೇಮ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜ್ಯೋತಿ, ಸದಸ್ಯೆ ನೇತ್ರಾವತಿ, ಶಾಲಾ ಮುಖ್ಯಶಿಕ್ಷಕಿ ಬಸಪ್ಪ, ಪಿ.ಡಿ.ಒ ಶ್ರೀನಿವಾಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ನಿರ್ವಹಣಾ ವಿಭಾಗದ ಮುಖ್ಯಸ್ಥ ಸತೀಶ್, ಗ್ರಾಮ ಪಂಚಾಯಿತಿ ಗ್ರಂಥ ಪಾಲಕ ದಿನೇಶ್, ಕಾಲೇಜಿನ ಸಮಾಜ ಕಾರ್ಯ ಪ್ರಾಧ್ಯಾಪಕರಾದ ದಿನಕರ ನಾಯ್ಕ್, ಅಶೋಕ್, ಎಸ್.ಎಸ್.ಎಸ್. ಶಿಬಿರಾಧಿಕಾರಿಗಳಾದ ಸತೀಶ್ ನಾಯ್ಕ್, ಶಂಕರನಾಯ್ಕ್, ವಿದ್ಯಾರ್ಥಿನಿ ಐಶ್ವರ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.