ADVERTISEMENT

ಹಿಂದುಳಿದವರ ವರದಿ ಜಾರಿಗೆ ಪ್ರಬಲರ ಅಡ್ಡಗಾಲು

ವಾಯ್ಸ್‌ ಆಫ್ ಒಬಿಸಿ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:02 IST
Last Updated 28 ಸೆಪ್ಟೆಂಬರ್ 2025, 5:02 IST
ತರೀಕೆರೆ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ತರೀಕೆರೆ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ವಾಯ್ಸ್‌ ಆಫ್ ಒಬಿಸಿ ಕಾರ್ಯಕ್ರಮ ನಡೆಯಿತು
ತರೀಕೆರೆ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ತರೀಕೆರೆ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ವಾಯ್ಸ್‌ ಆಫ್ ಒಬಿಸಿ ಕಾರ್ಯಕ್ರಮ ನಡೆಯಿತು   

ತರೀಕೆರೆ: ಹಿಂದುಳಿದವರ ಅಭಿವೃದ್ಧಿಗಾಗಿ ಹಲವಾರು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದರೂ, ಅವುಗಳನ್ನು ಅಂಗೀಕರಿಸಿ ಜಾರಿಗೊಳಿಸುವಲ್ಲಿ ಪ್ರಬಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿವೆ. ಇದರಿಂದಾಗಿ ಹಿಂದುಳಿದವರು ಜಾಗೃತರಾಗಿ ಸಂಘಟನಾ ಹೋರಾಟಗಳನ್ನು ಮಾಡಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಸಲಹೆ ನೀಡಿದರು.

ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ತರೀಕೆರೆ ಮತ್ತು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ವಾಯ್ಸ್‌ ಆಫ್ ಒಬಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಪಕ್ಷದ ವರಿಷ್ಠ ರಾಹುಲ್‍ ಗಾಂಧಿ ಅವರ ಸೂಚನೆಯಂತೆ ದೇಶದಲ್ಲಿ ಹಿಂದುಳಿದ ವರ್ಗಗಳ ಜನರು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಲಯಗಳಲ್ಲಿ ಬಹಳಷ್ಟು ಹಿಂದುಳಿದ್ದಾರೆ. ಅವರನ್ನು ಈ ಕ್ಷೇತ್ರಗಳಲ್ಲಿ ಮೇಲೆತ್ತಲು ದೇಶದಾದ್ಯಂತ ಸಂಘಟಿಸಿ ಜಾಗೃತಗೊಳಿಸಬೇಕು ಎಂದು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ  ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ರಾಜ್ಯ ನಾಯಕರು ಹಿಂದುಳಿದವರ ಸಂಘಟನೆ ಮತ್ತು ಜಾಗೃತಿ ಮೂಡಿಸುವಲ್ಲಿ ಪಣತೊಟ್ಟಿದೆ ಎಂದರು.

ADVERTISEMENT

ರಾಜ್ಯದಲ್ಲಿ ಕೆಲವರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ, ದಿಟ್ಟತನದಿಂದ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಯುತ್ತಿದೆ. ಇದರಲ್ಲಿ ಕೆಲವು ಸಮೀಕ್ಷಾದಾರರು ಶ್ರದ್ಧೆ ಮತ್ತು ಸಂಕಲ್ಪದಿಂದ ನಡೆಸಿ ಶೇ 50ರಷ್ಟು ಸಾಧನೆ ಮಾಡಿದ್ದಾರೆ. ಆದರೆ ಇನ್ನು ಕೆಲವರು ಸಮೀಕ್ಷೆಯಲ್ಲಿ ಬದ್ಧತೆ ತೋರದೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಪಕ್ಷದ 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಜನರ ತಲಾ ಆದಾಯ ಹೆಚ್ಚಿಗೆಯಾಗಿದ್ದು, ಜನರ ಆರ್ಥಿಕ ಮಟ್ಟವು ಉತ್ತಮವಾಗಿದೆ. ಪಕ್ಷದಲ್ಲಿ ಹಲವಾರು ವಿಭಾಗಗಳಿದ್ದು, ಆ ವಿಭಾಗಗಳಲ್ಲಿ ಪಂಚಾಯಿತಿಗೊಬ್ಬ ಅಧ್ಯಕ್ಷ ಮತ್ತು ಹೋಬಳಿ ಮಟ್ಟದಲ್ಲಿ ಸಮಿತಿಗಳನ್ನು ಮಾಡಿ ಪಕ್ಷವನ್ನು ಬಲಗೊಳಿಸಬೇಕು. ಮುಂಬರುವ ಮೂರು ವರ್ಷಗಳಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ, ಎಪಿಎಂಸಿ  ಮತ್ತು ವಿಧಾನಸಭೆ ಚುನಾವಣೆಗಳು ಬರಲಿದ್ದು, ಈ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಪಕ್ಷದ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಪುಟ್ಟೆಗೌಡ, ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ತರೀಕೆರೆ ಬ್ಲಾಕ್ ಅಧ್ಯಕ್ಷ ಎಚ್.ಯು. ಫಾರೂಕ್, ನಗರಾಧ್ಯಕ್ಷ ಟಿ.ಎಸ್.ವರ್ಮಾ ಪ್ರಕಾಶ್, ಅಜ್ಜಂಪುರ ಬ್ಲಾಕ್ ಅಧ್ಯಕ್ಷ ದಯಾನಂದ್, ಮಹಿಳಾ ಘಟಕದ ಹೇಮಲತಾ, ಮುಖಂಡರಾದ ಟಿ.ಎಸ್.ಧರ್ಮರಾಜ್, ಎ.ಜಿ.ಸಿರಾಜ್ ಮಾತನಾಡಿದರು. ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪಕ್ಷದ ಒಬಿಸಿ ಘಟಕದ ತಾಲ್ಲೂಕು ಅಧ್ಯಕ್ಷ ಟಿ.ಬಿ.ಶ್ರೀನಿವಾಸ್ ಸ್ವಾಗತಿಸಿದರು. ಪ್ರಚಾರ ಸಮಿತಿಯ ಅಧ್ಯಕ್ಷ ಪರಶುರಾಮ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.