ಬೀರೂರು: ಹೋಬಳಿ ವ್ಯಾಪ್ತಿಯಲ್ಲಿ ರೈತರು ಬಿತ್ತನೆ ಮಾಡಿದ್ದ ಈರುಳ್ಳಿ ಕಟಾವಿನ ಹಂತಕ್ಕೆ ಬಂದಿದ್ದು, ಉತ್ತಮ ದರ ಇದ್ದರೂ, ಮಳೆ ಕೊರತೆಯಿಂದ ಬೆಳೆ ಇಲ್ಲದೆ ರೈತರು ನಷ್ಟ ಅನುಭವಿಸುವಂತಾಗಿದೆ.
ಈ ಹಂಗಾಮಿನಲ್ಲಿ ಟೊಮೆಟೊ ದರ ₹100 ದಾಟಿದಾಗ, ಈರುಳ್ಳಿಗೂ ಉತ್ತಮ ಬೆಲೆ ಬರಲಿದೆ ಎಂದು ಭಾವಿಸಿದವರು ಹೆಚ್ಚು. ‘ಎಕರೆಗೆ ₹35 ಸಾವಿರದವರೆಗೆ ಖರ್ಚಾಗಿದೆ. ಆದೆ, ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗಿದೆ. ಕೆಲವೆಡೆ ನೀರು ಕೊಡಲಾಗದೆ ಬೆಳೆ ನೆಲಕಚ್ಚಿದೆ’ ಎನ್ನುತ್ತಾರೆ ರೈತರು.
ಸಾಮಾನ್ಯ ಮಳೆ ಲಭಿಸಿದರೂ ಈರುಳ್ಳಿ ಎಕರೆಗೆ 150 ರಿಂದ 170 ಚೀಲದಷ್ಟು (ಸುಮಾರು 85 ಕ್ವಿಂಟಲ್) ಇಳುವರಿ ಬರುತ್ತದೆ. ಆದರೆ, ಈ ಬಾರಿ ಸಾಕಷ್ಟು ಶ್ರಮ ವಹಿಸಿದ್ದರೂ ಇದರ ಅರ್ಧದಷ್ಟೂ ಫಸಲು ಬರುವ ನಿರೀಕ್ಷೆ ಕಡಿಮೆ. ಸದ್ಯ ಈರುಳ್ಳಿಯನ್ನು ಕಿತ್ತು ಜಮೀನಿನಲ್ಲೇ ಸ್ವಚ್ಛಗೊಳಿಸಿ ಕೊಟ್ಟರೆ ಕೆ.ಜಿಗೆ ₹15 ರಿಂದ ₹20ರವರೆಗೆ ದರ ಇದೆ. ಆದರೆ, ‘ಈ ಬಾರಿ ಖರ್ಚು ಮಾಡಿದ ಹಣವೂ ಮರಳಿ ಕೈಗೆ ಬರುವುದು ಅನುಮಾನ ʼ ಎನ್ನುತ್ತಾರೆ ಬಾಸೂರಿನ ಬೆಳೆಗಾರ ಶಿವಕುಮಾರ್.
‘ಮಳೆ ಕೊರತೆಯಿಂದ ಈರುಳ್ಳಿ ಇಳುವರಿ ಕುಸಿದೆ. ಆದರೆ, ಈಗ ಕಟಾವಿನ ಸಮಯವಾಗಿದ್ದು, ಮತ್ತೆ ಮಳೆ ಆರಂಭವಾದರೆ ಫಸಲನ್ನು ಜಮೀನಿನಲ್ಲಿ ಬಿಡುವಂತೆ ಇಲ್ಲ. ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ಹೊರಗೆ ಸಾಗಿಸಲು ಒಂದು ಚೀಲಕ್ಕೆ ಕನಿಷ್ಠ ₹30 ಖರ್ಚು ಬರಲಿದೆ. ಇನ್ನು ಸ್ಚಚ್ಛಗೊಳಿಸುವ ವೆಚ್ಚ ಬೇರೆ. ಹೀಗಾದರೆ ನಮ್ಮ ಇಡೀ ವರ್ಷದ ಶ್ರಮ ಮಣ್ಣು ಪಾಲಾದಂತೆ ಎನ್ನುತ್ತಾರೆ ಬೀರೂರಿನ ಕೃಷಿಕ ಗಿರೀಶ್.
ಬೀರೂರು ಹೊರವಲಯದ ಮುದ್ದಾಪುರ ಎರೆಬಯಲು ಈರುಳ್ಳಿ ಬೆಳೆಗಾಗಿಯೇ ಮೀಸಲಿದ್ದು, ಮುಂಗಾರಿನಲ್ಲಿ ಮಳೆ ಆಶ್ರಯಿಸಿ ಈರುಳ್ಳಿ ಬಿತ್ತನೆಯ ವಾಡಿಕೆ ಇದೆ. ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ ಬಿತ್ತುವ ರೈತರು ಮುಂಗಾರಿನ ಬೆಳೆ ಕೈ ಹಿಡಿಯಲಿ ಎನ್ನುವ ನಿರೀಕ್ಷೆಯಲ್ಲಿ ವರ್ಷ ವರ್ಷವೂ ಎಷ್ಟೇ ನಷ್ಟ ಅನುಭವಿಸಿದರೂ ಸಾಂಪ್ರದಾಯಿಕ ಬೆಳೆ ಪದ್ಧತಿ ಕೈಬಿಟ್ಟಿಲ್ಲ. ಅಪರೂಪಕ್ಕೊಮ್ಮೆ ಈರುಳ್ಳಿಗೆ ಕೆಜಿಗೆ ₹20-25ರ ಆಸುಪಾಸಿನಲ್ಲಿ ದರ ಲಭಿಸುತ್ತದೆ. ಇನ್ನುಳಿದಂತೆ ಪ್ರತಿ ವರ್ಷವೂ ಈರುಳ್ಳಿ ಬೆಳೆದದವರ ಕಣ್ಣಲ್ಲಿ ಕಣ್ಣೀರು ತರಿಸುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.