ADVERTISEMENT

ಕಡೂರು: ಬೆಳೆಗಾರನಿಗೆ ಕಣ್ಣೀರು ತಂದ ಈರುಳ್ಳಿ

ಎನ್‌.ಸೋಮಶೇಖರ
Published 21 ಸೆಪ್ಟೆಂಬರ್ 2025, 5:21 IST
Last Updated 21 ಸೆಪ್ಟೆಂಬರ್ 2025, 5:21 IST
<div class="paragraphs"><p>ಕಡೂರು ತಾಲ್ಲೂಕು ಹಿರೇನಲ್ಲೂರು ಹೋಬಳಿಯ ರೈತರೊಬ್ಬರು ಬೆಳೆದ ಈರುಳ್ಳಿಯನ್ನು ಕೂಲಿಕಾರರು ಸಂಸ್ಕರಿಸುತ್ತಿರುವುದು</p></div>

ಕಡೂರು ತಾಲ್ಲೂಕು ಹಿರೇನಲ್ಲೂರು ಹೋಬಳಿಯ ರೈತರೊಬ್ಬರು ಬೆಳೆದ ಈರುಳ್ಳಿಯನ್ನು ಕೂಲಿಕಾರರು ಸಂಸ್ಕರಿಸುತ್ತಿರುವುದು

   

ಕಡೂರು: ಈರುಳ್ಳಿ ದರ ಒಮ್ಮೆ ಕುಸಿತದ ಮೂಲಕ ಬೆಳೆದವರಿಗೆ ಕಣ್ಣೀರು ತರಿಸಿದರೆ, ಇನ್ನೊಮ್ಮೆ ದರ ಗಗನ ಮುಖಿಯಾಗಿ ಗ್ರಾಹಕನಿಗೆ ಬಿಸಿ ಮುಟ್ಟಿಸುತ್ತದೆ. ಈ ಬಾರಿ ರೈತರ ಜಮೀನುಗಳಲ್ಲಿ ಫಸಲು ಉತ್ತಮ ವಾಗಿದ್ದರೂ ದರ ಕುಸಿತ ಹಾಗೂ ಮಾರು ಕಟ್ಟೆಯಲ್ಲಿ ಬೇಡಿಕೆ ಇಲ್ಲದ ಪರಿಣಾಮ ರೈತರು ಕಂಗಾಲಾಗುವಂತೆ ಮಾಡಿದೆ.

ಕಡೂರು ತಾಲ್ಲೂಕಿನಲ್ಲಿ ಹಿರೇನಲ್ಲೂರು, ಚೌಳಹಿರಿಯೂರು ಮತ್ತು ಕಸಬಾ ಹೋಬಳಿಗಳಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯುತ್ತಾರೆ. ಬೀರೂರು ಮತ್ತು ಯಗಟಿ ಹೋಬಳಿಗಳ ಕೆಲವು ಕಡೆ ರೈತರು ಈರುಳ್ಳಿ ಬೆಳೆಯಲು ಮುಂದಾದರೂ, ಒಟ್ಟಾರೆ ಇಡೀ ತಾಲ್ಲೂಕಿನಲ್ಲಿ ಈ ಬಾರಿ 400 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ.

ADVERTISEMENT

ಜೂನ್ ತಿಂಗಳ ಮಧ್ಯಭಾಗದಲ್ಲಿ ಈರುಳ್ಳಿ ಬಿತ್ತನೆ ಮಾಡುತ್ತಾರೆ. 1 ಎಕರೆ ಭೂಮಿಯಲ್ಲಿ 100ರಿಂದ 110 ಚೀಲ (ಅಂದಾಜು 7ಟನ್) ಫಸಲು ರೈತರ ಕೈ ಸೇರುತ್ತದೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ರೋಗಬಾಧೆಗೆ ಗುರಿಯಾಗುವ ಫಸಲು ರೈತನಿಗೆ ಎಷ್ಟೋ ಬಾರಿ ಜಮೀನಿನ ಮೇಲೆಯೇ ಕಣ್ಣೀರು ಹಾಕಿಸಿದ್ದೂ ಇದೆ.

ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ತಾಲ್ಲೂಕಿನಲ್ಲಿ ಈರುಳ್ಳಿ ಕೊಯ್ಯಲು ಆರಂಭವಾಗಿ ಖರೀದಿದಾರರ ಆದ್ಯತೆಯ ಮೇರೆಗೆ ವಹಿವಾಟು ನಡೆಯುತ್ತದೆ. ಧಾರಣೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು, ಜಮೀನುಗಳಲ್ಲಿ ಶಾಶ್ವತ ಶೆಡ್ ನಿರ್ಮಿಸಿ ಈರುಳ್ಳಿ ಸಂಗ್ರಹಿಸುವ ಪದ್ಧತಿಯೂ ಇದೆ. ಬಿಸಿಲು ಅಥವಾ ಮಳೆಗೆ ಸಿಕ್ಕು ಮೇಲಿನ ಸಿಪ್ಪೆ ಕಳೆದುಕೊಂಡರೆ ಅದನ್ನು ವೇಸ್ಟೇಜ್ ಲೆಕ್ಕಕ್ಕೆ ಎಸೆಯಬೇಕಾಗುತ್ತದೆ. ರಸ್ತೆ ಬದಿ ಜಮೀನು ಇರದಿದ್ದರೆ ಎರೆ ಭೂಮಿಯಿಂದ ರೈತರು ಶೆಡ್‌ಗಳಿಗೆ ಕೊಯಿಲು ಮಾಡಿದ ಫಸಲು ಸಾಗಿಸು ವುದೂ ಕಷ್ಟಕರ ಸಾಧ್ಯತೆಯೇ ಆಗಿದೆ.

ಒಂದು ಎಕರೆ ಭೂಮಿಯಲ್ಲಿ ಈರುಳ್ಳಿ ಉತ್ಪಾದನೆಗೆ ₹50ರಿಂದ ₹60 ಸಾವಿರ ವೆಚ್ಚವಾಗುತ್ತದೆ. ಬಿತ್ತನೆ ಬೀಜ ₹500 ಕಿಲೋಗೆ ಇದ್ದರೆ, ಒಂದು ಎಕರೆ ಭೂಮಿಯಲ್ಲಿ ಬಿತ್ತನೆಗೆ ನಾಲ್ಕು ಕಿಲೋ ಬೀಜ ಬೇಕು. ಹಂತ ಹಂತವಾಗಿ ನಾಲ್ಕು ಬಾರಿ ಕಳೆ ತೆಗೆಸಲು ₹20 ಸಾವಿರ ವೆಚ್ಚವಾಗುತ್ತದೆ. ಗೊಬ್ಬರ 17ಆಲ್, ಡಿಎಪಿ ಪೂರೈಕೆಗೆ (4ರಿಂದ 5ಚೀಲ) ₹8 ಸಾವಿರ, ಬೇಸಾಯಕ್ಕೆ ₹4 ಸಾವಿರ, ಈರುಳ್ಳಿಯನ್ನು ಜಮೀನಿನಿಂದ ಸಾಗಿಸಲು ಟ್ರ್ಯಾಕ್ಟರ್‌ಗೆ ಹೇರಿದ್ದು ಸೇರಿ ₹1,600 ಖರ್ಚು ಹಾಗೂ ಒಂದು ಚೀಲ (60-65 ಕಿಲೋ) ಕೊಯಿಲು ಮಾಡಲು ಕೂಲಿ ₹100 ವೆಚ್ಚವಾಗುತ್ತದೆ. ಬೆಂಕಿ ರೋಗ ಬಂದರೆ ಔಷಧ ಸಿಂಪಡಣೆಯ ವೆಚ್ಚವೂ ಸೇರುತ್ತದೆ. ಇನ್ನು ರೈತರ ಶ್ರಮಕ್ಕೆ ಬೆಲೆ ಕಟ್ಟುವುದು ಹೇಗೆ? ಎನ್ನುವುದು ಪ್ರಶ್ನೆ.

‘ಸದ್ಯ ಈರುಳ್ಳಿ ದರ ರೈತರನ್ನು ಕಂಗೆಡಿಸಿದೆ. ಕಿಲೋಗೆ ₹5ರಿಂದ ₹7ಕ್ಕೆ ಮಧ್ಯವರ್ತಿಗಳು ಕೇಳುತ್ತಿದ್ದಾರೆ. ವೆಚ್ಚ ನೋಡಿದರೆ ಆನೆಯಷ್ಟಿದೆ, ಬೆಲೆ ಆಡಿನಷ್ಟು. ಮಾರುವುದು ಹೇಗೆ, ನಷ್ಟವನ್ನೇ ಅನುಭವಿಸುವುದಾದರೆ ರೈತರ ಶ್ರಮಕ್ಕೆ ಬೆಲೆ ಎಲ್ಲಿದೆ. ನಾವು ಮಾಡಿದ ಖರ್ಚೂ ಹುಟ್ಟುವುದಿಲ್ಲ ಎನ್ನುವುದಾದರೆ ಯಾರ ಬಳಿ ನಮ್ಮ ಕಷ್ಟ ಹೇಳಿಕೊಳ್ಳಬೇಕು. ಕಳೆದ ವರ್ಷ ಇದೇ ಸಮಯದಲ್ಲಿ ಕಿಲೋ ಈರುಳ್ಳಿ ದರ ಜಮೀನುಗಳ ಮೇಲೆಯೇ ₹28ರಿಂದ ₹30ರವರೆಗೆ ಇತ್ತು. ಈ ಬಾರಿ ಮಳೆ ಕೊರತೆ ನಡುವೆಯೂ ಫಸಲು ಉತ್ತಮವಾಗಿಯೇ ಬಂದಿದೆ. ಆದರೆ, ಬೆಲೆಯೇ ಇಲ್ಲ. ಹೆಚ್ಚಿನ ರೈತರಿಗೆ ಈರುಳ್ಳಿ ಸಂಗ್ರಹ ಮಾಡಿಕೊಳ್ಳುವ ಅಥವಾ ಕೋಲ್ಡ್‌ಸ್ಟೋರೇಜ್‌ನಲ್ಲಿ ಸಂಗ್ರಹಿಸುವ ಶಕ್ತಿಯೂ ಇರುವುದಿಲ್ಲ, ಅಂಥವರು ಏನು ಮಾಡಬೇಕು. ರೈತಾಪಿ ಕೆಲಸವೇ ಸಾಕೆನಿಸಿದೆ ಎಂದು ಹಿರೇನಲ್ಲೂರಿನ ರೈತ ಶಿವಲಿಂಗಪ್ಪ ಮತ್ತು ತಿಪ್ಪೇಶಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

‘ಈವರೆಗೆ ರಫ್ತಿಗೆ ಅವಕಾಶ ಇರಲಿಲ್ಲ, ಸರ್ಕಾರ ಸದ್ಯ ಈರುಳ್ಳಿ ರಫ್ತಿಗೆ ಅವಕಾಶ ಕಲ್ಪಿಸಿದೆ. ಬಾಂಗ್ಲಾದೇಶ, ಮಲೇಷಿಯಾ ಮತ್ತು ಶ್ರೀಲಂಕಾಕ್ಕೆ ನಮ್ಮಿಂದ ಹೆಚ್ಚು ರಫ್ತು ಆಗುತ್ತಿತ್ತು. ಅಲ್ಲಿ ರಫ್ತಿಗೆ ಸುಂಕ ಶೇ 50ಕ್ಕೆ ಏರಿಕೆಯಾಗಿದ್ದು, ಬೆಲೆ ಮೇಲೆ ಪರಿಣಾಮ ಬೀರಿದೆ. ನಮ್ಮಲ್ಲಿ ಇನ್ನೂ ಉತ್ತಮ ಗುಣಮಟ್ಟದ ಈರುಳ್ಳಿ ಬಂದಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಶೇ 60ರಷ್ಟು ಬೆಳೆ ಇನ್ನೂ ಬರುವುದು ಬಾಕಿ ಇದೆ. ಅಲ್ಲಿಂದ ನವೆಂಬರ್‌ಗೆ ಮತ್ತೆ ಹೊಸ ಈರುಳ್ಳಿ ಬರಲಿದೆ. ಉತ್ತಮ ಗುಣಮಟ್ಟದ ಫಸಲಿಗೆ ಬರುವ ದಿನಗಳಲ್ಲಿ ಬೆಲೆ ಸಿಗಬಹುದು. ಆದರೆ ಹೀಗೇ ಎಂದು ಹೇಳಲಾಗದು’ ಎಂದು ಹೆಸರು ಹೇಳಲಿಚ್ಛಿಸದ ದಲ್ಲಾಳಿ ಒಬ್ಬರು ತಿಳಿಸಿದರು.

ಒಟ್ಟಾರೆ ಕನಿಷ್ಠ ₹15 ದರ ಸಿಕ್ಕರೆ ಮಾಡಿದ ವೆಚ್ಚಕ್ಕೆ ಸಮವಾಯಿತು ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ ಎನ್ನುವ ರೈತರ ಅನಿಸಿಕೆಗೆ ತಕ್ಕಂತೆ ಅವರ ಶ್ರಮಕ್ಕೆ ತಕ್ಕ ಫಲ ದೊರೆಯಲಿ ಎನ್ನುವುದು ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.