ADVERTISEMENT

ಆನ್‌ಲೈನ್‌ನಲ್ಲಿ ಪ್ರೀತಿ ಆಸೆ ತೋರಿಸಿ ಹಣ ವಂಚನೆ

ಚಾಮೆಟ್‌ ಆ್ಯಪ್‌ಗೆ ಹಣ ಪಾವತಿಸಿದ ಯುವಕ

ಬಿ.ಜೆ.ಧನ್ಯಪ್ರಸಾದ್
Published 21 ಫೆಬ್ರುವರಿ 2022, 16:32 IST
Last Updated 21 ಫೆಬ್ರುವರಿ 2022, 16:32 IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಯುವಕನೊಬ್ಬ ಆನ್‌ಲೈನ್‌ನಲ್ಲಿ ಪ್ರೀತಿ ಆಸೆಗೆ ಬಿದ್ದು ಅಪ್ಲಿಕೇಶನ್‌ವೊಂದಕ್ಕೆ (ಆ್ಯಪ್) ಹಂತ ಹಂತವಾಗಿ ಹಣ ಪಾವತಿಸಿದ್ದಾರೆ. ಕೊನೆಗೆ ಹಣ ಮತ್ತು ಪ್ರೀತಿ ಎರಡೂ ಸಿಗದೆ ಯುವಕ ಪರಿತಪಿಸುವಂತಾಗಿದೆ.

ನಗರದ ಸೈಬರ್‌ (ಸಿಇಎನ್‌) ಠಾಣೆಯಲ್ಲಿ ಯುವಕ ದೂರು ನೀಡಿದ್ದಾರೆ. ₹ 10 ಲಕ್ಷ ವಂಚನೆಯಾಗಿದೆ. ಮೋಸ ಮಾಡಿದ ಯುವತಿಯನ್ನು ಪತ್ತೆ ಹಚ್ಚಿ ಕ್ರಮ ವಹಿಸಬೇಕು, ವಂಚಿಸಿರುವ ಹಣ ವಾಪಸ್‌ ಕೊಡಿಸಬೇಕು ಎಂದು ಕೋರಿದ್ದಾರೆ. ಮೋಸದ ಕುರಿತು ಯುವಕ ದೂರಿನಲ್ಲಿ ವಿವರಿಸಿದ್ದಾರೆ.
ಯುವಕ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ. ‘ವರ್ಕ್‌ ಫ್ರಂ ಹೋಮ್‌’ ಕಾಯಕ ನಿರ್ವಹಣೆಯಲ್ಲಿ ತೊಡಗಿದ್ದಾರೆ.

‘ಫೇಸ್‌ ಬುಕ್‌’ ನೋಡುವಾಗ ‘ಶೈನಿ ಆಫ್‌ ಕ್ವೀನ್‌’ ಬಳಕೆದಾರರಿಂದ ಮೆಸೆಂಜರ್‌ಗೆ ಬಂದ ಲಿಂಕ್‌ ಅನ್ನು ಯುವಕ ಡೌನ್‌ ಲೋಡ್‌ ಮಾಡಿಕೊಂಡಿದ್ದಾರೆ. ‘ಚಾಮೆಟ್‌ ಆ್ಯಪ್‌’ (Chammet app) ಅದೊಂದು ‘ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಷನ್‌’.

ADVERTISEMENT

ಇಬ್ಬರು ಪರಸ್ಪರ ಚಾಟ್‌ನಲ್ಲಿ ತೊಡಗಿದ್ದಾರೆ. ‘ಶೈನಿ ಆಫ್‌ ಕ್ವೀನ್‌’ ಯುವಕನಿಗೆ ಪ್ರೀತಿ ಆಸೆ ತೋರಿಸಿದ್ದಾರೆ. ‘ಚಾಮೆಟ್‌ ಆ್ಯಪ್‌’ನ ಎಲ್ಲ ಹಂತಗಳನ್ನು ಪೂರೈಸುವಂತೆ ಶೈನಿ ಬೇಡಿಕೆ ಇಟ್ಟಿದ್ದಾರೆ.

ಯುವಕ ಆ್ಯಪ್‌ನ ಎಂಟು ಹಂತಗಳನ್ನು ಪೂರೈಸಿ, ₹ 10 ಲಕ್ಷ ಹಣ ‍ಪಾವತಿಸಿದ್ದಾರೆ. ಕೆಲ ದಿನಗಳ ನಂತರ ಶೈನಿ ಯುವಕನ ಜತೆ ಚಾಟ್‌ ಮಾಡುವುದನ್ನು ನಿಲ್ಲಿಸಿದ್ದಾರೆ.

‘ಶೈನಿ ನನ್ನನ್ನು ಬಿಟ್ಟು ಮತ್ತೊಬ್ಬ ಯುವಕನ ಜತೆ ಚಾಟ್‌ನಲ್ಲಿ ತೊಡಗಿದ್ದಾರೆ. ನನಗೆ ಮೋಸ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಐಟಿ ಕಾಯ್ದೆ, ಐಪಿಸಿ 419, 420 (ವಂಚನೆ, ಮೋಸ) ಪ್ರಕರಣ ದಾಖಲಿಸಲಾಗಿದೆ.


****

‘ಕೂಲಂಕಷವಾಗಿ ಪರಿಶೀಲಿಸಿ ತನಿಖೆ’

‘ಚಾಟ್‌ ಸ್ಕ್ರೀನ್‌ ಶಾಟ್‌, ಹಣ ಪಾವತಿ ದಾಖಲೆ ವಿವರವನ್ನು ನೀಡುವಂತೆ ಯುವಕನಿಗೆ ತಿಳಿಸಿದ್ದೇವೆ. ಕೂಲಂಕಷವಾಗಿ ಪರಿಶೀಲಿಸಿ ತನಿಖೆ ಮಾಡುತ್ತೇವೆ’ ಎಂದು ನಗರದ ಸಿಇಎನ್‌ ಠಾಣೆ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಫೇಸ್‌ಬುಕ್‌ನಲ್ಲಿ ಯುವತಿ ಪರಿಚಯವಾಗಿ ಹಲವು ತಿಂಗಳು ಇಬ್ಬರು ಪರಸ್ಪರ ಚಾಟ್‌ ಮಾಡಿದ್ದಾರೆ. ಯುವಕನ ಖಾತೆಯನ್ನು ಯುವತಿ ಬ್ಲಾಕ್‌ ಮಾಡಿದ್ದಾರೆ. ನಂತರ ಸಂಪರ್ಕ ಯುವಕಗೆ ಯುವತಿ ಜತೆ ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ. ವಿವರ, ದಾಖಲೆ ಕಲೆ ಹಾಕಿ ಸತ್ಯಾಂಶ ಪತ್ತೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.