ADVERTISEMENT

ಕಳಸ: ಕೆಪಿಎಸ್ ಮೈದಾನದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 13:46 IST
Last Updated 2 ಜುಲೈ 2025, 13:46 IST
ಕೆಳಗೂರು ರಮೇಶ್
ಕೆಳಗೂರು ರಮೇಶ್   

ಕಳಸ: ಇಲ್ಲಿನ ಕೆಪಿಎಸ್ ಶಾಲಾ ಮೈದಾನವನ್ನೇ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ತಾಲ್ಲೂಕು ಕ್ರೀಡಾಂಗಣವಾಗಿ ನಿರ್ಮಿಸುವ ಪ್ರಸ್ತಾಪಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡ ಕೆಳಗೂರು ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜು. 8ರಂದು ಕಳಸ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಸಭೆಯನ್ನು ಕರೆದಿದೆ. ಆದರೆ, ಹೊಸದಾಗಿ 5 ಎಕರೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಬದಲು ಶಾಲೆಯ ಸಣ್ಣ ಮೈದಾನವನ್ನೇ ತಾಲ್ಲೂಕು ಕ್ರೀಡಾಂಗಣ ಮಾಡುವ ಹಿಂದೆ ಹುನ್ನಾರ ಇದೆ ಎಂದು ಅವರು ಆರೋಪಿಸಿದ್ದಾರೆ.

ಕಳಸದ ಸರ್ವೆ ನಂ.641ರಲ್ಲಿ ನೆಲ್ಲಿಕೆರೆ ಬಳಿ 30 ಎಕರೆ ಕಂದಾಯ ಭೂಮಿ ಲಭ್ಯವಿದೆ. ಇದರಲ್ಲಿ 5 ಎಕರೆ ಕ್ರೀಡಾಂಗಣಕ್ಕೆ ಮತ್ತು 2 ಎಕರೆ ತಾಲ್ಲೂಕು ಆಸ್ಪತ್ರೆಗೆ ಕೂಡಲೇ ಕಂದಾಯ ಇಲಾಖೆ ಮಂಜೂರು ಮಾಡಬೇಕು. ಭೂಮಿ ಒತ್ತುವರಿ ಆಗಿದ್ದರೂ ತೆರವು ಮಾಡಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಆದೇಶಿಸಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.

ADVERTISEMENT

ಈಗಿನ ಕೆಪಿಎಸ್ ಮೈದಾನದಲ್ಲಿ ತಾಲ್ಲೂಕು ಕ್ರೀಡಾಂಗಣ ಮಾಡಿದರೆ ಒಂದು ಸುತ್ತಿನಲ್ಲಿ 400 ಮೀಟರ್ ಟ್ರ್ಯಾಕ್‌ ಸಿಗದೆ ಕ್ರೀಡಾಪಟುಗಳಿಗೆ ಅನ್ಯಾಯ ಆಗುತ್ತದೆ. ಜೊತೆಗೆ ಶಾಲೆಯ ಪಕ್ಕದಲ್ಲೇ ತಾಲ್ಲೂಕು ಕ್ರೀಡಾಂಗಣ ಮಾಡುವುದರಿಂದ ಭವಿಷ್ಯದಲ್ಲಿ ಪಾಠ ಪ್ರವಚನಕ್ಕೆ ಅಡ್ಡಿ ಆಗುತ್ತದೆ ಎಂದು ಅವರು ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.